ಹಿಂಡೆನ್‌ಬರ್ಗ್‌ ಶಾರ್ಟ್‌ ಸೆಲ್ಲಿಂಗ್‌ ಕೇಸ್‌ – ಅದಾನಿ ಗ್ರೂಪ್‌ಗೆ ಸೆಬಿಯಿಂದ ಕ್ಲೀನ್ ಚಿಟ್

Public TV
2 Min Read

ಮುಂಬೈ: ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪ ಪ್ರಕರಣದಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (SEBI) ಅದಾನಿ (Adani) ಗ್ರೂಪ್‌ಗೆ ಕ್ಲೀನ್‌ ಚಿಟ್‌ ನೀಡಿದೆ.

ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದೆ ಎಂದು ಆರೋಪಿಸಿ 2023ರ ಜನವರಿಯಲ್ಲಿ ಹಿಂಡೆನ್‍ಬರ್ಗ್ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು (shell companies) ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಆದ್ರೆ ತನಿಖೆಯಲ್ಲಿ ಯಾವುದೇ ಆರೋಪಗಳನ್ನು ಸಾಬೀತು ಮಾಡಲು ವಿಫಲವಾದ ಹಿನ್ನೆಲೆ ಅದಾನಿ ಗ್ರೂಪ್‌ಗೆ ಕ್ಲೀನ್‌ ಚಿಟ್‌ ನೀಡಲಾಗಿದೆ.

ಸೆಬಿ ತನಿಖೆಯಲ್ಲಿ ಕಂಡುಬಂದ ಅಂಶವೇನು?
ಸುದೀರ್ಘ ಅವಧಿಗಳ ಕಾಲ ತನಿಖೆ ನಡೆಸಿದ ಸೆಬಿ, ಅದಾನಿ ಗ್ರೂಪ್‌ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ, ಆರೋಪವನ್ನು ಸಾಬೀತುಪಡಿಸಲು ಯಾವುದೇ ಬಲವಾದ ಸಾಕ್ಷಿಗಳು ಕಂಡುಬಂದಿಲ್ಲ ಎಂದು ಹೇಳಿದೆ.

ಸೆಬಿಯಿಂದ ಕ್ಲೀನ್‌ ಚಿಟ್‌ ಪಡೆದ ಬಳಿಕ ಪ್ರತಿಕ್ರಿಯೆ ನೀಡಿರುವ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್‌ ಅದಾನಿ, ಇದು ಸತ್ಯಕ್ಕೆ ಸಂದ ಜಯ. ಸಂಪೂರ್ಣ ತನಿಖೆ ಬಳಿಕ ಹಿಂಡೆನ್‌ ಬರ್ಗ್‌ನ ಎಲ್ಲಾ ಆರೋಪಗಳು ಆಧಾರರಹಿತ ಎಂದು ಸೆಬಿ ದೃಢಪಡಿಸಿದೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅದಾನಿ ಗ್ರೂಪ್‌ನ ಹೆಗ್ಗುರುತು. ಹಿಂಡೆನ್‌ಬರ್ಗ್‌ನ ಸುಳ್ಳು ಆರೋಪಗಳಿಂದ ಹಣವನ್ನು ಕಳೆದುಕೊಂಡ ಹೂಡಿಕೆದಾರರ ನೋವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಸುಳ್ಳು ಹಕ್ಕುಗಳನ್ನು ಹರಡುವವರು ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದು ಅದಾನಿ ಸಮೂಹ ಸಂಸ್ಥೆಗಳಾದ ಅದಾನಿ ಪವರ್ ಲಿಮಿಟೆಡ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ ಮತ್ತು ಅಡಿಕಾರ್ಪ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ಗೆ ಪುಷ್ಠಿ ಸಿಕ್ಕಂತಾಗಿದೆ.

Share This Article