ನವದೆಹಲಿ: ಭಾರತ ಮತ್ತು ಪಾಕ್ (India vs Pak) ನಡುವೆ ಇಂದು ನಡೆಯಲಿರುವ ಏಷ್ಯಾ ಕಪ್ (Asia Cup) ಕ್ರಿಕೆಟ್ ಪಂದ್ಯಕ್ಕೆ ಅವಕಾಶ ನೀಡಿದ್ದಕ್ಕೆ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಭಾರತಕ್ಕೆ ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಆಡಲು ಅವಕಾಶ ನೀಡಿದೆ. 26 ಜನರ ಜೀವಗಳಿಗಿಂತ ಆರ್ಥಿಕ ಲಾಭವೇ ಮುಖ್ಯವೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಉಗ್ರರು ಪಹಲ್ಗಾಮ್ನಲ್ಲಿ ನಮ್ಮ 26 ನಾಗರಿಕರರನ್ನು ಗುಂಡು ಹಾರಿಸಿ ಕೊಂದಿದ್ದರು. ಇದಕ್ಕಾಗಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಆಡಲು ನಿರಾಕರಿಸುವ ಅಧಿಕಾರ ನಿಮಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕದನಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ – ಗಿಲ್ಗೆ ಗಾಯ
ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ನಾಗರಿಕರ ಜೀವಕ್ಕಿಂತ ಈ ಪಂದ್ಯದ ಮೂಲಕ ಗಳಿಸುವ ಹಣ ಹೆಚ್ಚು ಮೌಲ್ಯಯುತವೇ? ಬಿಸಿಸಿಐ ಒಂದು ಕ್ರಿಕೆಟ್ ಪಂದ್ಯದಿಂದ ಎಷ್ಟು ಹಣ ಪಡೆಯುತ್ತದೆ? 2000 – 3000 ಕೋಟಿ ರೂ.? ನಮ್ಮ 26 ನಾಗರಿಕರ ಜೀವಕ್ಕಿಂತ ಇದು ಮುಖ್ಯವೇ? ನಾವು ಆ 26 ನಾಗರಿಕರ ಪರ ಅಂದು ನಿಂತಿದ್ದೆವು, ಇಂದು ನಾವು ಅವರೊಂದಿಗೆ ನಿಲ್ಲುತ್ತೇವೆ. ನಾಳೆಯೂ ಅವರೊಂದಿಗೆ ನಿಲ್ಲುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ನಿಗದಿಯಾಗಿರುವ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವಂತೆ ಅನೇಕ ವಿರೋಧ ಪಕ್ಷದ ನಾಯಕರು ಕರೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಭಾರತ ಆಟದಲ್ಲಿ ಭಾಗವಹಿಸುವುದನ್ನು ಟೀಕಿಸಿದ್ದಾರೆ. ಪಂದ್ಯವನ್ನು ರದ್ದುಗೊಳಿಸಬೇಕು. ಈ ಪಂದ್ಯದಲ್ಲಿ ಆಡುವ ನಿರ್ಧಾರವು ʻಭಯೋತ್ಪಾದನೆಯೊಂದಿಗೆ ಮಾತುಕತೆ ಇಲ್ಲʼ ಎಂಬ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಹೇಳೋದೇನು?
ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ವಿರೋಧಿಸುವುದು ನ್ಯಾಯಸಮ್ಮತವಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲೂ ಪಂದ್ಯಗಳನ್ನು ಆಡಲಾಗುತ್ತಿತ್ತು. ನಾವು ಪಾಕಿಸ್ತಾನದ ವಿರುದ್ಧ ಹೋರಾಡಬೇಕು. ನಮ್ಮ ನೆಲದಲ್ಲಿ ನಾವು ಅವರೊಂದಿಗೆ ಹೋರಾಡಿ ಸೋಲಿಸಿದ್ದೇವೆ. ಪಾಕಿಸ್ತಾನದ ನೆಲದಲ್ಲಿಯೂ ಅವರನ್ನು ಸೋಲಿಸಿದ್ದೇವೆ. ವಿದೇಶಿ ನೆಲದಲ್ಲಿಯೂ ಅವರನ್ನು ಸೋಲಿಸುತ್ತೇವೆ. ನಾವು ಪಂದ್ಯದಿಂದ ಹಿಂದೆ ಸರಿಯಬಾರದು ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿದ್ದಾರೆ.
ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಪಂದ್ಯ ಮತ್ತು ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಎರಡೂ ವಿಚಾರ ಬೇರೆ ಬೇರೆ ಎಂದಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್ ಕ್ರಿಕೆಟ್ ಕದನ | ಉಗ್ರ ಪೋಷಕ ಪಾಕಿಸ್ತಾನದ ಜೊತೆ ಕ್ರಿಕೆಟ್ ಬೇಕಾ? – ಜನರ ಆಕ್ರೋಶ