ಮೇಕೆದಾಟು ಯೋಜನೆಗೆ ಅನುಮತಿ ನೀಡಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

Public TV
1 Min Read

ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬಾಯ್ಲರ್ ಹೌಸ್: ಸಿದ್ದರಾಮಯ್ಯ

ಮಂಡ್ಯ: ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದಾರೆ.

ಮೇಕೆದಾಟು ಯೋಜನೆಗೆ ಅನಗತ್ಯವಾಗಿ ತಕರಾರು ಮಾಡಬೇಡಿ. ಮೇಕೆದಾಟು ವಿಚಾರವಾಗಿ ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು. ಯೋಜನೆ ನಿರ್ಮಾಣವಾದರೆ ತಮಿಳುನಾಡು ಹಾಗೂ ಕರ್ನಾಟಕ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಮೇಕೆದಾಟು ಯೋಜನೆ ಜಾರಿಯಾದರೆ, 66 ಟಿಎಂಸಿ ನೀರನ್ನು ನಾವು ಶೇಖರಣೆ ಮಾಡಿಕೊಳ್ಳಬಹುದು. ಅಗತ್ಯ ಬಿದ್ದಾಗ ಈ ನೀರನ್ನು ನಾವು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಒಪ್ಪಂದದ ಪ್ರಕಾರ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು. ಪ್ರಸಕ್ತ ಸಾಲಿನಲ್ಲಿ ಈವರೆಗೆ 98 ಟಿಎಂಸಿ ನೀರು ಹರಿಸಬೇಕಿತ್ತು. ಉತ್ತಮ ಮಳೆಯಾಗಿರುವುದರಿಂದ 221 ಟಿಎಂಸಿ ನೀರನ್ನು ಹರಿಸಿದ್ದೇವೆ. ಹೆಚ್ಚುವರಿಯಾಗಿ 122 ಟಿಎಂಸಿ ನೀರು ಹರಿಸಿದ್ದೇವೆ. ಹಾಗಾಗಿ, ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಮೈಶುಗರ್‌ ಕಾರ್ಖಾನೆ ಬಗ್ಗೆ ಮಾತನಾಡಿ, ರೈತರ ಜಿಲ್ಲೆಯಾಗಿರುವ ಮಂಡ್ಯದಲ್ಲಿ ಸರ್ಕಾರ ಸ್ವಾಮ್ಯದಲ್ಲಿ ನಡೆಯುತ್ತಿರುವ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಮೈಶುಗರ್ ಕಾರ್ಖಾನೆಗೆ ಬಾಯ್ಲರ್ ಹೌಸ್ ನೀಡಲಾಗುವುದು. ಈಗಾಗಲೇ ಮೈಶುಗರ್ ಕಾರ್ಖಾನೆಯ ಅಭಿವೃದ್ಧಿಗಾಗಿ 112 ಕೋಟಿ ರೂ. ಅನುದಾನ ನೀಡಲಾಗಿದೆ. ಸಚಿವರು ಹಾಗೂ ಶಾಸಕರು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಲಾಭದಾಯಕವಾಗಿ ನಡೆಯುವ ರೀತಿ ಯೋಜಿಸಬೇಕು ಎಂದಿದ್ದಾರೆ.

Share This Article