ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ

Public TV
2 Min Read

– ಮೃತರ ಕುಟುಂಬಕ್ಕೆ ಜೆಡಿಎಸ್‌ನಿಂದ 1 ಲಕ್ಷ ಪರಿಹಾರ ಘೋಷಣೆ
– ಸರ್ಕಾರದಿಂದ ಪರಿಹಾರ ಹೆಚ್ಚಳಕ್ಕೆ ದೇವೇಗೌಡರ ಆಗ್ರಹ

ಹಾಸನ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು 10 ಮಂದಿ ಸಾವಿಗೀಡಾಗಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಜನರ ಕಷ್ಟ ಕೇಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮೊಸಳೆ ಹೊಸಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಲು ಹಾಸನಕ್ಕೆ ದೇವೇಗೌಡರು ಆಗಮಿಸಿದರು. ಜಿಲ್ಲಾಸ್ಪತ್ರೆಯ ಹೊರಭಾಗದಿಂದ ವ್ಹೀಲ್‌ಚೇರ್‌ನಲ್ಲೇ ಆಗಮಿಸಿದರು. ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಭೇಟಿಗೂ ಮುನ್ನ ದುರಂತದ ಕುರಿತು ಹಾಸನದ ಪ್ರವಾಸಿ ಮಂದಿರದಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿದ್ದರು. ಆ ಊರಿನ ಮಗ ನಾನು. ಅದಕ್ಕೆ 93 ನೇ ವಯಸ್ಸಿನಲ್ಲೂ ಬಂದಿದ್ದೇನೆ. ನಮ್ಮದು ಸಣ್ಣ ರಾಜಕೀಯ ಪಕ್ಷ. ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ, ಮೇಜರ್ ಎಲ್ಲಾ ನಾನೇ ಮಾಡ್ತೀವಿ. ಜಾಸ್ತಿ ಗಾಯ ಆದವರಿಗೆ ಪಕ್ಷದಿಂದ 25 ಸಾವಿರ, ಸಣ್ಣಪುಟ್ಟ ಗಾಯ ಆದವರಿಗೆ 20, ಸ್ವಲ್ಪ ಗಾಯ ಆದವರಿಗೆ 15 ಸಾವಿರ ಕೊಡ್ತೀವಿ. ಮೃತರ ಕುಟುಂಬಕ್ಕೆ ಪಕ್ಷದಿಂದ 1 ಲಕ್ಷ ಹಣ ಕೊಡುತ್ತೇವೆ ಎಂದು ತಿಳಿಸಿದ್ದರು.

5 ಲಕ್ಷ ಸಾಲಲ್ಲ, ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ದುಡಿಯೋ ಮಕ್ಕಳು ಸಾವನ್ನಪ್ಪಿದ್ದಾರೆ. ನಿಮ್ಮ ಹಣ ಬ್ಯಾಂಕಿನಲ್ಲಿಟ್ಟರೂ ಬರುವ ಬಡ್ಡಿಯಲ್ಲಿ ಬದುಕಲು ಆಗಲ್ಲ. ನೆರೆ ರಾಜ್ಯಕ್ಕೆ ಹೇಗೆ ಪರಿಹಾರ ಕೊಡ್ತಿದ್ದಾರೆ. ವಯಸ್ಸಾದವರು ಇದ್ದಾರೆ, ದುಡಿಯೋರು ಸಾವನ್ನಪ್ಪಿದ್ದಾರೆ, ನಾನು ರಾಜಕೀಯ ಮಾಡಲ್ಲ ಇಲ್ಲ. ಪರಿಹಾರವಾಗಿ 10 ಲಕ್ಷ ನೀಡಬೇಕು. ಕುಟುಂಬದ ಸ್ಥಿತಿ ನೋಡಿ ಪರಿಹಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

ಇಲ್ಲಿ ನಾನು ಜಾತಿ ತರಲ್ಲ, ಮಾಡಲ್ಲ. ಲೋಕಲ್ ಪೊಲೀಸ್ ಸ್ವಲ್ಪ ಕೇರ್ ತೆಗೆದುಕೊಂಡಿದ್ದರೆ ಇದು ಆಗ್ತಿರಲಿಲ್ಲ. ನಾಳೆ ಜಿಲ್ಲೆಗಳಿಗೆ ಹೋಗಬಹುದು. ದೇವೇಗೌಡರೇ 93 ನಡೀತಿದೆ. ರಾಜಕೀಯದಲ್ಲಿ ನಿಮಗೆ ಭ್ರಮೆ ಇಲ್ಲ. ಕೆಲಸ ಮಾಡುವ ಮನಸ್ಸು-ಶಕ್ತಿ ಇದೆಯೋ ಹೋರಾಟ ಮಾಡ್ತೀನಿ. ಅದು ನನ್ನ ನೇಚರ್. ನಾಳೆ ಪ್ರೆಸ್‌ಮೀಟ್ ಮಾಡಿದ್ರೆ ಬೇರೆ ಚರ್ಚೆ ಮಾಡೋಣ. ಇಲ್ಲಿ ಮಿಕ್ಸ್ ಮಾಡೋದು ಬೇಡ. ರಾಜಕೀಯದಲ್ಲಿ ನನ್ನ ಕೆಲಸ ಮುಗಿದಿಲ್ಲ. ಇನ್ನೂ ಸ್ವಲ್ಪ ಕೆಲಸ ಇದೆ ಎಂದು ತಿಳಿಸಿದರು.

ಟ್ರಕ್ ದುರಂತದಲ್ಲಿ ಮೃತಪಟ್ಟವರ ಪೈಕಿ 6 ಮಂದಿ ಹೊಳೆನರಸೀಪುರದವರು. ಸುಮಾರು 65 ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದ ಜೊತೆ ದೇವೇಗೌಡರು ರಾಜಕೀಯ ನಂಟು ಹೊಂದಿದ್ದಾರೆ. ಮೊಸಳೆ ಹೊಸಳ್ಳಿ ಹೋಬಳಿಯಲ್ಲಿ ಹೆಚ್ಚು ಕೌಟುಂಬಿಕ ಸಂಬಂಧವನ್ನು ದೊಡ್ಡಗೌಡ ದಂಪತಿ ಹೊಂದಿದ್ದಾರೆ.

Share This Article