ರಾತ್ರಿ ಮಲಗಿದ್ದಾಗ ಕಣ್ಣಿಗೆ ಫೆವಿಕ್ವಿಕ್‌ ಅಂಟು – ಬೆಳಗ್ಗೆ ಕಣ್ಣು ತೆರೆಯಲಾಗದೇ ಒದ್ದಾಡುತ್ತಿದ್ದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

Public TV
1 Min Read

– ಸಹಪಾಠಿಗಳಿಂದಲೇ ಕೃತ್ಯ ಆರೋಪ

ಭುವನೇಶ್ವರ: ಒಡಿಶಾದ (Odisha) ಕಂಧಮಾಲ್ ಜಿಲ್ಲೆಯ 8 ಹಾಸ್ಟೆಲ್ ವಿದ್ಯಾರ್ಥಿಗಳು ನಿದ್ರಿಸುತ್ತಿದ್ದಾಗ ಅವರ ಕಣ್ಣುಗಳಿಗೆ ಫೆವಿಕ್ವಿಕ್ (Fevikwik) ಎಂಬ ಅಂಟು ಸುರಿದ ಕಾರಣ ಅವರ ಕಣ್ಣಿಗಳಿಗೆ ಗಾಯಗಳಾಗಿವೆ. ಕಣ್ಣನ್ನೇ ತೆರೆಯಲಾಗದಂತಹ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಿರಿಂಗಿಯಾ ಬ್ಲಾಕ್‌ನ ಸಲಗುಡದಲ್ಲಿರುವ ಸೆಬಾಶ್ರಮ್ ಶಾಲೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮಲಗಿ ಬೆಳಗ್ಗೆ ಎದ್ದ ವಿದ್ಯಾರ್ಥಿಗಳಿಗೆ ಕಣ್ಣು ತೆರೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅವರನ್ನು ಗೋಚಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಫುಲ್ಬಾನಿಯಲ್ಲಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಮೇಘಸ್ಫೋಟ – ಬೆಳೆ ಹಾನಿ, ಅವಶೇಷಗಳಡಿ ಹೂತುಹೋದ ವಾಹನಗಳು

ಅಂಟು ಮಕ್ಕಳ ಕಣ್ಣುಗಳಿಗೆ ಹಾನಿಯನ್ನುಂಟು ಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿರುವುದರಿಂದ ಅಪಾಯ ಏನೂ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದು, ಒಬ್ಬ ವಿದ್ಯಾರ್ಥಿಯನ್ನು ಡಿಸ್ಚಾರ್ಜ್‌ ಮಾಡಲಾಗಿದೆ. ಆದರೆ, ಇತರ ಏಳು ಮಂದಿ ವೈದ್ಯರ ನಿಗಾದಲ್ಲಿದ್ದಾರೆ.

ಘಟನೆಯ ನಂತರ, ಜಿಲ್ಲಾಡಳಿತವು ಶಾಲಾ ಮುಖ್ಯೋಪಾಧ್ಯಾಯ ಮನೋರಂಜನ್ ಸಾಹು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಹಾಸ್ಟೆಲ್ ಒಳಗೆ ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಪತ್ತೆಹಚ್ಚಲು ಮತ್ತು ವಾರ್ಡನ್‌ಗಳು, ಸೂಪರಿಂಟೆಂಡೆಂಟ್ ಸೇರಿದಂತೆ ಸಿಬ್ಬಂದಿ ಸದಸ್ಯರ ಪಾತ್ರವನ್ನು ಪರಿಶೀಲಿಸಲು ತನಿಖೆ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ನಿರ್ಲಕ್ಷಕ್ಕೊಳಗಾಗಿದ್ದ ಈಶಾನ್ಯ ಭಾರತ ಈಗ ಅಭಿವೃದ್ಧಿಯ ಎಂಜಿನ್‌: ಮೋದಿ

ಮಕ್ಕಳು ಕ್ಯಾಂಪಸ್ ಒಳಗೆ ಅಂಟು ಹೇಗೆ ಸಂಗ್ರಹಿಸಿದರು? ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಂಧಮಲ್‌ನ ಕಲ್ಯಾಣ ಅಧಿಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಾರೆ.

Share This Article