ಕೊಪ್ಪಳದಲ್ಲಿ 2,345 ಕೋಟಿ ವೆಚ್ಚದ ಉಕ್ಕು ಘಟಕ ಸ್ಥಾಪನೆ

Public TV
2 Min Read

ಕೊಪ್ಪಳ: ಬಜಾಜ್ ಗ್ರೂಪ್ ಜೊತೆಗಿನ ಸಹಭಾಗಿತ್ವದ ಮುಕಂದ ಸುಮಿ ಕಂಪನಿ ಮೂಲಕ ಕೊಪ್ಪಳದಲ್ಲಿನ (Koppal) ಉಕ್ಕು ತಯಾರಿಕಾ ಘಟಕದಲ್ಲಿ 2,345 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದನ್ನು ಸುಮಿಟೊಮೊ ಖಚಿತಪಡಿಸಿದೆ.

ಈ ಕುರಿತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಾಹಿತಿ ನೀಡಿದ್ದು, ಈ ಘಟಕವು 2028ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ವಾರ್ಷಿಕ 3,50,000 ಟನ್‌ಗಳಷ್ಟು ಕಬ್ಬಿಣ, ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಬಯೊಮಾಸ್ ಘಟಕವನ್ನು ಸ್ಥಾಪಿಸುವ ಬಗ್ಗೆಯೂ ಸುಮಿಟೊಮೊ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವರು ವಿವರಿಸಿದ್ದಾರೆ.ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

ಬೆಂಗಳೂರಿನಲ್ಲಿ ತನ್ನ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರಿಕ್ವೆನ್ಸಿ ಡ್ರೈವ್ಸ್ ಘಟಕ ಸ್ಥಾಪಿಸುವ ಸಂಬಂಧದ ಬಂಡವಾಳ ಹೂಡಿಕೆಯನ್ನು ಯಸ್ಕಾವಾ ಕಂಪನಿಯು ರಾಜ್ಯದ ನಿಯೋಗಕ್ಕೆ ಖಚಿತಪಡಿಸಿದೆ. ಇದು ಅತ್ಯಾಧುನಿಕ ತಯಾರಿಕಾ ತಂತ್ರಜ್ಞಾನದ ಕೇಂದ್ರವಾಗಿ ಬೆಳೆಯುವ ಮೂಲಕ ಕರ್ನಾಟಕದ ಸ್ಥಾನವನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

ಪಾಲುದಾರಿಕೆಯಡಿ ಹುಬ್ಬಳ್ಳಿಯಲ್ಲಿರುವ ಪ್ರತಿಷ್ಠಿತ ಎನ್‌ಜಿಇಎಫ್ ಕಾರ್ಖಾನೆ ಪುನ:ಶ್ಚೇತನದ ಸಾಧ್ಯತೆಗಳ ಕುರಿತು ಜಪಾನಿನ ಜೆಎಫ್‌ಇ ಷೋಜಿ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದ್ದು, ಕಾರ್ಖಾನೆಗೆ ಆಹ್ವಾನ ನೀಡಿದ್ದಾರೆ.

ಬಂಡವಾಳ ಹೂಡಿಕೆ ಆಕರ್ಷಿಸಲು ಜಪಾನ್‌ಗೆ ಭೇಟಿ ನೀಡಿರುವ ರಾಜ್ಯ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಸಚಿವರು, ಕಂಪನಿಯ ಉನ್ನತಾಧಿಕಾರಿಗಳ ಜೊತೆ ಬುಧವಾರ (ಸೆ.10) ನಡೆದ ಸಭೆಯಲ್ಲಿ ಹುಬ್ಬಳ್ಳಿ ಎನ್‌ಜಿಇಎಫ್ ಪುನಶ್ಚೇತನದ ಪ್ರಸ್ತಾವ ಮುಂದಿಟ್ಟಿದ್ದಾರೆ. ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಜೆಎಫ್‌ಇ ಮುಂಚೂಣಿಯಲ್ಲಿದೆ. ಹುಬ್ಬಳ್ಳಿಯಲ್ಲಿ ಇರುವ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿಯನ್ನು (ಎನ್‌ಜಿಇಎಫ್) ರಾಜ್ಯ ಸರ್ಕಾರದ ಪಾಲುದಾರಿಕೆಯಡಿ ಪುನಶ್ಚೇತನಗೊಳಿಸುವ ಸಂಬಂಧ ಪೂರ್ವಭಾವಿ ಮಾತುಕತೆ ನಡೆಸಲು ಕಂಪನಿಯ ಉನ್ನತಾಧಿಕಾರಿಗಳು ಹುಬ್ಬಳ್ಳಿಯ ಘಟಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವರ ಜೊತೆಗಿನ ಸಭೆಯಲ್ಲಿ ಕಂಪನಿಯ ಜೆಎಫ್‌ಇ ಷೋಜಿ ಕಂಪನಿಯ ಯಂತ್ರೋಪಕರಣಗಳ ವಿಭಾಗದ ಜನರಲ್ ಮ್ಯಾನೇಜರ್ ಹಿರೋಶಿ ಲಿಜಿಮಾ, ಎಲೆಕ್ಟ್ರಿಕಲ್ ಅಪ್ಲೈಯನ್ಸಸ್ ಸ್ಟೀಲ್ ಪ್ಲ್ಯಾನಿಂಗ್ ವಿಭಾಗದ ಮ್ಯಾನೇಜರ್ ಹಿಡೆಕಸು ಯೋಶಿಒಕೊ ಮತ್ತಿತರರು ಭಾಗವಹಿಸಿದ್ದರು. ಇದನ್ನೂ ಓದಿ: ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್

ಜಪಾನ್ ಭೇಟಿಯ ಮೂರನೇ ದಿನ, ರಾಜ್ಯದ ನಿಯೋಗವು ಸುಮಿಟೊಮೊ, ಯಸ್ಕಾವಾ, ಜೆಎಫ್‌ಇ ಶೋಜಿ ಕಂಪನಿಗಳ ಉನ್ನತಾಧಿಕಾರಿಗಳ ಜೊತೆ ಮಾತುಕತೆ ನಡೆಸಿತು. ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ (ಬಿಇವಿ) ಮತ್ತು ವಿದ್ಯುತ್ ಚಾಲಿತ ವಾಹನಗಳ (ಇವಿ) ತಯಾರಿಕೆಯಲ್ಲಿ ಬಳಸಲಾಗುವ ಮೋಟರ್ ಕೋರ್ಸ್ ತಯಾರಿಸುವ 400 ಕೋಟಿ ರೂ. ವೆಚ್ಚದ ಯೋಜನೆಯು ಶೀಘ್ರದಲ್ಲಿಯೇ ಕಾರ್ಯಗತಗೊಳ್ಳಲಿದೆ ಎಂದು ಕಂಪನಿಯು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದೆ.

ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ, ಮತ್ತಿತರರು ಇದ್ದರು.ಇದನ್ನೂ ಓದಿ: ಐಫೋನ್‌ 17 ಬಿಡುಗಡೆ – ಯಾವ ದೇಶದಲ್ಲಿ ಎಷ್ಟು ದರ? ಕಡಿಮೆ ದರ ಎಲ್ಲಿ?

Share This Article