– 17ನೇ ವಯಸ್ಸಿನಲ್ಲೇ RSS ಸೇರಿದ್ದ ರಾಧಾಕೃಷ್ಣನ್
ನವದೆಹಲಿ: ಸಿ.ಪಿ ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಸಿ.ಪಿ ರಾಧಾಕೃಷ್ಣನ್ (CP Radhakrishnan) 452 ಮತಗಳನ್ನು ಪಡೆದಿದ್ದರೆ, ಎದುರಾಳಿ ನಿವೃತ್ತ ನ್ಯಾ. ಬಿ. ಸುದರ್ಶನ್ ರೆಡ್ಡಿ (B SudershanReddy) ಅವರು 300 ಮತಗಳನ್ನ ಪಡೆದು ಪರಾಭವಗೊಂಡರು.
ನೂತನ ಉಪರಾಷ್ಟ್ರಪತಿಯಾದ ರಾಧಾಕೃಷ್ಣನ್ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಎನ್ಡಿಎ ಒಕ್ಕೂಟದ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ರಾಧಾಕೃಷ್ಣನ್ ಯಾರು, ಹಿನ್ನೆಲೆ ಏನೂ ಅಂತ ನೋಡೋದಾದ್ರೆ…
* 1957ರಲ್ಲಿ ತಮಿಳುನಾಡಿನ ಕೊಂಗು ಪ್ರದೇಶದ ತಿರುಪ್ಪೂರಿನಲ್ಲಿ ಜನಿಸಿದ ಸಿ.ಪಿ ರಾಧಾಕೃಷ್ಣನ್ (ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ), ಕಳೆದ ವರ್ಷ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
* 68 ವರ್ಷ ವಯಸ್ಸಿನ ಅವರು ಈ ಹಿಂದೆ ಫೆಬ್ರವರಿ 2023 ರಿಂದ ಜುಲೈ 2024ರ ವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ ಮತ್ತು ಜುಲೈ 2024 ರ ನಡುವೆ ಅವರು ತೆಲಂಗಾಣ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರು.
* 2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ನಾಲ್ಕು ತಿಂಗಳೊಳಗೆ, ರಾಧಾಕೃಷ್ಣನ್ ಅವರು ರಾಜ್ಯದ ಎಲ್ಲಾ 24 ಜಿಲ್ಲೆಗಳಿಗೆ ಪ್ರಯಾಣಿಸಿ ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದರು.
* 17ನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿದ ಅವರು, ಭಾರತೀಯ ಜನ ಸಂಘದೊಂದಿಗೂ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು. 1998 ಮತ್ತು 1999 ರಲ್ಲಿ ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
* ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದಾಗ (2004-2007) ಅವರು 93 ದಿನಗಳ ಕಾಲ 19 ಸಾವಿರ ಕಿಮೀ ‘ರಥ ಯಾತ್ರೆ’ಯನ್ನು ಕೈಗೊಂಡಿದ್ದರು. ಭಾರತದ ಎಲ್ಲಾ ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಾದಕ ದ್ರವ್ಯಗಳ ಪಿಡುಗನ್ನು ಎದುರಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಅವರು ವಿಭಿನ್ನ ಕಾರಣಗಳಿಗಾಗಿ ಇನ್ನೂ ಎರಡು ಪಾದಯಾತ್ರೆಗಳನ್ನು ಕೈಗೊಂಡಿದ್ದರು.
* ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ರಾಧಾಕೃಷ್ಣನ್ ಅವರು ತಮಿಳುನಾಡಿನ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಹೆಸರನ್ನು ಹೊಂದಿದ್ದಾರೆ.
* 1957 ರಲ್ಲಿ ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ಅವರು ಕೊಯಮತ್ತೂರಿನ ಚಿದಂಬರಂ ಕಾಲೇಜಿನಿಂದ ಬಿಬಿಎ ಪದವಿ ಪಡೆದಿದ್ದಾರೆ. ಒಬ್ಬ ಉತ್ಸಾಹಿ ಕ್ರೀಡಾಪಟುವಾಗಿರುವ ಇವರು ಟೇಬಲ್ ಟೆನ್ನಿಸ್ನಲ್ಲಿ ಕಾಲೇಜು ಚಾಂಪಿಯನ್ ಆಗಿದ್ದರು. ಅಷ್ಟೇ ಅಲ್ಲದೇ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
* ಸಂಸದರಾಗಿದ್ದಾಗ ಅವರು ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ.
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (2004) ಸಂಸದೀಯ ನಿಯೋಗದ ಭಾಗವಾಗಿದ್ದರು ಮತ್ತು ತೈವಾನ್ಗೆ ತೆರಳಿದ್ದ ಮೊದಲ ಭಾರತೀಯ ನಿಯೋಗದ ಭಾಗವಾಗಿದ್ದರು.
* ರಾಧಾಕೃಷ್ಣನ್ ಸಾರ್ವಜನಿಕ ಆಡಳಿತದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೆಂಗಿನ ನಾರು ಮಂಡಳಿಯ ಅಧ್ಯಕ್ಷರಾಗಿದ್ದಾಗ (2016–2020) ಬೋರ್ಡ್ ದಾಖಲೆಯ 2,532 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಫ್ತು ಮಾಡಿತ್ತು. ಕೇರಳದ ಬಿಜೆಪಿಯ ಅಖಿಲ ಭಾರತ ಉಸ್ತುವಾರಿಯಾಗಿ (2020–2022) ಕೆಲಸ ಮಾಡಿದ್ದಾರೆ.
* ರಾಜಕೀಯ ಮತ್ತು ಆಡಳಿತದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮಿಳುನಾಡಿನ ರಾಜಕೀಯ ಮತ್ತು ಬಿಜೆಪಿಯ ಸಂಘಟನೆಯ ಅನುಭವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಮೋದಿಯಿಂದ ಮೊದಲ ಮತ
ಉಪರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ಗಂಟೆ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಮೊದಲ ಚಲಾಯಿಸಿದ್ದರು. ಬಳಿಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಮಿತ್ ಶಾ ಸೇರಿದಂತೆ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು. ಇದನ್ನೂ ಓದಿ: ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆ
15 ಮತಗಳು ಅಮಾನ್ಯ
ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ಒಟ್ಟು 788 ಸಂಸದರಿದ್ದಾರೆ. ಪ್ರಸ್ತುತ ಎರಡೂ ಸದನಗಳಲ್ಲಿ 7 ಸ್ಥಾನಗಳು ಖಾಲಿ ಇರುವ ಕಾರಣ ಒಟ್ಟು 781 ಸಂಸದರು ಮತ ಚಲಾಯಿಸಬೇಕಾಗಿತ್ತು. ಆದ್ರೆ ಇದರಲ್ಲಿ ಬಿಆರ್ಎಸ್ನ 4, ಬಿಜೆಡಿಯ 7, ಅಕಾಲಿ ದಳದ 3 ಮತ್ತು 1 ಸ್ವತಂತ್ರ ಸಂಸದರು ಮತದಾನದಿಂದ ದೂರ ಉಳಿದಿದ್ದರು. ಹೀಗಾಗಿ ಒಟ್ಟು 767 ಸಂಸದರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಇದರಲ್ಲಿ 15 ಮತಗಳನ್ನು ಅಮಾನ್ಯವೆಂದು ಘೋಷಿಸಲಾಯಿತು. 752 ಮತಗಳನ್ನು ಮಾತ್ರವೇ ಮಾನ್ಯ ಮಾಡಿ ಮತ ಎಣಿಕೆಗೆ ಪರಿಗಣಿಸಲಾಯಿತು. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ
25 ಸಂಸದರಿಂದ ಅಡ್ಡ ಮತದಾನ
17ನೇ ಉಪರಾಷ್ಟ್ರಪತಿ ಹುದ್ದೆಯಲ್ಲಿ ಗೆಲುವು ಸಾಧಿಸಿರುವ ಸಿ.ಪಿ ರಾಧಾಕೃಷ್ಣನ್, ಒಟ್ಟು 452 ಮೊದಲ ಪ್ರಾಶಸ್ತ್ಯದ ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, 300 ಮತಗಳನ್ನು ಪಡೆದಿರುವ ಸುದರ್ಶನ್ ರೆಡ್ಡಿ ಪರಾಭಗೊಂಡಿದ್ದಾರೆ. ಎನ್ಡಿಎ ಅಭ್ಯರ್ಥಿಗಳ ಸ್ವಂತ ಸಂಸದರನ್ನು ಹೊರತುಪಡಿಸಿ ಇನ್ನೂ 14 ಸಂಸದರು ಅಡ್ಡಮತದಾನ ನಡೆಸಿದ್ದಾರೆ. ಅಲ್ಲದೇ ಎನ್ಡಿಎ ಬಲಕ್ಕಿಂತ 25 ಮತಗಳು ಹೆಚ್ಚಾಗಿ ರಾಧಾಕೃಷ್ಣನ್ಗೆ ಬಂದಿವೆ. ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ