ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆ

Public TV
1 Min Read

ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿಂದು ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಿದ್ದು, ನೂತನ ಉಪರಾಷ್ಟ್ರಪತಿ ಸಿ.ಪಿ ರಾಧಕೃಷ್ಣನ್ (CP Radhakrishnan) ಆಯ್ಕೆಯಾಗಿದ್ದಾರೆ.

ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್‌ ಗೆಲುವು ಸಾಧಿಸಿದರು. ರಾಧಾಕೃಷ್ಣನ್‌ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, ಪ್ರತಿಸ್ಪರ್ಧಿ ಸುದರ್ಶನ್ ರೆಡ್ಡಿ (BSudershan Reddy) 300 ಮತಗಳನ್ನು ಪಡೆದು ಪರಾಭವಗೊಂಡರು.

ಉಪರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ಗಂಟೆ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಮೊದಲ ಚಲಾಯಿಸಿದ್ದರು. ಬಳಿಕ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಮಿತ್‌ ಶಾ ಸೇರಿದಂತೆ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.

ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ಒಟ್ಟು 788 ಸಂಸದರಿದ್ದಾರೆ. ಪ್ರಸ್ತುತ ಎರಡೂ ಸದನಗಳಲ್ಲಿ 7 ಸ್ಥಾನಗಳು ಖಾಲಿ ಇರುವ ಕಾರಣ ಒಟ್ಟು 781 ಸಂಸದರು ಮತ ಚಲಾಯಿಸಬೇಕಾಗಿತ್ತು. ಆದ್ರೆ ಇದರಲ್ಲಿ ಬಿಆರ್‌ಎಸ್‌ನ 4, ಬಿಜೆಡಿಯ 7, ಅಕಾಲಿ ದಳದ 3 ಮತ್ತು 1 ಸ್ವತಂತ್ರ ಸಂಸದರು ಮತದಾನದಿಂದ ದೂರ ಉಳಿದಿದ್ದರು. ಹೀಗಾಗಿ ಒಟ್ಟು 767 ಸಂಸದರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಇದರಲ್ಲಿ 15 ಮತಗಳನ್ನು ಅಮಾನ್ಯವೆಂದು ಘೋಷಿಸಲಾಯಿತು. 752 ಮತಗಳನ್ನು ಮಾತ್ರವೇ ಮಾನ್ಯ ಮಾಡಿ ಮತ ಎಣಿಕೆಗೆ ಪರಿಗಣಿಸಲಾಯಿತು.

14 ಸಂಸದರಿಂದ ಅಡ್ಡ ಮತದಾನ
17ನೇ ಉಪರಾಷ್ಟ್ರಪತಿ ಹುದ್ದೆಯಲ್ಲಿ ಗೆಲುವು ಸಾಧಿಸಿರುವ ಸಿ.ಪಿ ರಾಧಾಕೃಷ್ಣನ್‌, ಒಟ್ಟು 452 ಮೊದಲ ಪ್ರಾಶಸ್ತ್ಯದ ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, 300 ಮತಗಳನ್ನು ಪಡೆದಿರುವ ಸುದರ್ಶನ್ ರೆಡ್ಡಿ ಪರಾಭಗೊಂಡಿದ್ದಾರೆ. ಎನ್‌ಡಿಎ ಅಭ್ಯರ್ಥಿಗಳ ಸ್ವಂತ ಸಂಸದರನ್ನು ಹೊರತುಪಡಿಸಿ ಇನ್ನೂ 14 ಸಂಸದರು ಅಡ್ಡಮತದಾನ ನಡೆಸಿದ್ದಾರೆ. ಅಲ್ಲದೇ ಎನ್‌ಡಿಎ ಬಲಕ್ಕಿಂತ 25 ಮತಗಳು ಹೆಚ್ಚಾಗಿ ರಾಧಾಕೃಷ್ಣನ್‌ಗೆ ಬಂದಿವೆ.

ಜಗದೀಪ್ ಧನ್ಕರ್‌ ಅವರು ಆರೋಗ್ಯ ಕಾರಣಗಳನ್ನು ನೀಡಿ ಕಳೆದ ಜುಲೈ 21 ರಂದು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

Share This Article