ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

Public TV
2 Min Read

– ಮಾಜಿ ಪ್ರಧಾನಿ ಮೇಲೂ ಹಲ್ಲೆ, ಹಾಲಿ ಪ್ರಧಾನಿ ಜೊತೆ 4 ಮಂತ್ರಿಗಳೂ ರಾಜೀನಾಮೆ

ಕಠ್ಮಂಡು: ಭ್ರಷ್ಟಚಾರ, ಸೋಷಿಯಲ್‌ ಮೀಡಿಯಾ ನಿಷೇಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವೇಳೆ ಉದ್ರಿಕ್ತರು ನೇಪಾಳದ ಹಣಕಾಸು ಸಚಿವನಿಗೆ (Finance Minister) ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೊದಲು ಮನೆ ಮೇಲೆ ಹಲ್ಲೆ ನಡೆಸಿದ ಪ್ರತಿಭಟನಾಕಾರು ಬಳಿಕ ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ.

ಮಂಗಳವಾರ ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್‌ರನ್ನ (Bishnu Prasad Paudel) ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಪ್ರತಿಭಟನಾಕಾರರು ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

29 ಸೆಕೆಂಡುಗಳ ವಿಡಿಯೋನಲ್ಲಿ ಬಿಷ್ಣು ಪ್ರಸಾದ್‌ ಜೀವ ಉಳಿಸಿಕೊಳ್ಳಲು ಓಡೋಡಿ ಹೋಗ್ತಿದ್ದ ದೃಶ್ಯ ಕಂಡುಬಂದಿದೆ. ಉದ್ರಿಕ್ತರು ಮನೆಗೆ ಮುತ್ತಿಗೆ ಹಾಕ್ತಿದ್ದಂತೆ ಸಚಿವರು ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದಾರೆ. ಕಾಂಪೌಂಡ್‌ನಿಂದ ಆಚೆ ಬರ್ತಿದ್ದಂತೆ ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಓಡ್ತಿದ್ದಂತೆ ಮತ್ತೊಬ್ಬ ಫಿಲ್ಮಿ ಸ್ಟೈಲ್‌ನಲ್ಲಿ ಜಂಪ್‌ ಮಾಡಿ ಜಾಡಿಸಿ ಒದ್ದಿದ್ದಾನೆ. ಬಳಿಕ ಅಲ್ಲೇ ಇದ್ದ ಮತ್ತೊಂದು ಗುಂಪು ಅವರನ್ನು ರಕ್ಷಣೆ ಮಾಡಿ ಕರೆದೊಯ್ದಿದೆ. ಈ ದೃಶ್ಯಗಳು 29 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ.

ಮಾಜಿ ಪ್ರಧಾನಿಗೂ ಗೂಸಾ
ನೇಪಾಳ ಹಿಂಸಾತ್ಮಕ ಪ್ರತಿಭಟನೆ ವೇಳೆ ಹಣಕಾಸು ಸಚಿವೆ ಅರ್ಜು ರಾಣಾ ದೇವುಬಾ ಅವರ ಪತಿ ಶೇರ್ ಬಹದ್ದೂರ್ ದೇವುಬಾ ಮೇಲೂ ಹಲ್ಲೆ ನಡೆದಿದೆ. ಸರ್ಕಾರಿ ಸಂಕೀರ್ಣಗಳು, ಸಂಸತ್ತು ಮತ್ತು ಹಿರಿಯ ರಾಜಕೀಯ ನಾಯಕರ ಮನೆಗಳ ಮೇಲೂ ಉದ್ರಿಕ್ತರ ಗುಂಪು ದಾಳಿ ನಡೆಸಿವೆ. ಈ ಬೆನ್ನಲ್ಲೇ ನೇಪಾಳ ಸಚಿವರ ರಕ್ಷಣೆಗೆ ಮೂರು ಹೆಲಿಕಾಪ್ಟರ್‌ಗಳನ್ನ ನಿಯೋಜನೆ ಮಾಡಲಾಗಿದೆ.

ಪ್ರಧಾನಿ ಜೊತೆಗೆ ನಾಲ್ವರು ಸಚಿವರ ರಾಜೀನಾಮೆ
ಇಂದು ಮುಂಜಾನೆ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಪ್ರಧಾನಿ ಕೆಪಿ ಶರ್ಮಾ ಓಲಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಓಲಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿಗಳೊಂದಿಗೆ ನಾಲ್ವರು ಸಚಿವರೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

ಇನ್ನೂ ಅತಿಯಾದ ಭ್ರಷ್ಟಾಚಾರ, ಸೋಷಿಯಲ್‌ ಮೀಡಿಯಾ ಮೇಲಿನ ನಿಷೇಧ ವಿರೋಧಿಸಿ ನೇಪಾಳದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19 ಮಂದಿ ಸಾವು – ನೇಪಾಳ ಗೃಹ ಸಚಿವ ರಾಜೀನಾಮೆ

Share This Article