ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

Public TV
1 Min Read
-10 ಲಕ್ಷ ರೂ. ರಿವಾರ್ಡ್‌ ಹೊಂದಿದ್ದ ಮಾವೋವಾದಿಯ ಹತ್ಯೆ 

ರಾಂಚಿ: ಭದ್ರತಾ ಪಡೆ ಹಾಗೂ ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿಯನ್ನು ಭದ್ರತಾ ಪಡೆಗಳು (Security Forces) ಹತ್ಯೆಗೈದಿದ್ದಾರೆ.

ಜಾರ್ಖಂಡ್‌ನ (Jharkhand) ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗೋಯಿಲ್‌ಕೇರಾ ಪೊಲೀಸ್ ಠಾಣಾ (Goilkera Police Station) ವ್ಯಾಪ್ತಿಯಲ್ಲಿ ಬರುವ ಬುರ್ಜುವಾ ಬೆಟ್ಟದಲ್ಲಿ ಭಾನುವಾರ (ಸೆ.7) ಬೆಳಗ್ಗೆ ಎನ್‌ಕೌಂಟರ್ ನಡೆದಿದೆ.

ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಎನ್‌ಕೌಂಟರ್ ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸಿಪಿಐನ (ಮಾವೋವಾದಿ) ಸ್ವಯಂ ಘೋಷಿತ ವಲಯ ಕಮಾಂಡರ್ ಅಮಿತ್ ಹನ್ಸ್ದಾ ಅಲಿಯಾಸ್ ಆಪ್ತಾನ್ ಎಂದು ಗುರುತಿಸಲಾಗಿದೆ. ಈ ಮೊದಲು ಈ ವ್ಯಕ್ತಿಯನ್ನು ಪತ್ತೆಹಚ್ಚಿದರೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಸದ್ಯ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಗೋಯಿಲ್‌ಕೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದಕ್ಕೆ ಮಾವೋವಾದಿಗಳು ಬರುವ ಬಗ್ಗೆ ಚೈಬಾಸಾ ಪೊಲೀಸ್ ವರಿಷ್ಠಾಧಿಕಾರಿಗೆ ಸುಳಿವು ಸಿಕ್ಕಿತ್ತು. ಅವರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಭಾನುವಾರ (ಸೆ.7) ಬೆಳಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮಾವೋವಾದಿಗಳು ದಟ್ಟಾರಣ್ಯದೊಳಗೆ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ವೇಳೆ ಓರ್ವನ ಮೃತದೇಹ ಪತ್ತೆಯಾಗಿದೆ ಎಂದಿದ್ದಾರೆ.

Share This Article