ತುಳು ರಾಜ್ಯದ 2ನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿಕೆಶಿ

Public TV
2 Min Read

– ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ

ಬೆಂಗಳೂರು: ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ನಿಮ್ಮ ಬೇಡಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ʻಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿʼ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ ಎಂದು ಚಟಾಕಿ ಹಾರಿಸಿದರು.

ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ ಕೊಟ್ಟವರು, ಧಾರ್ಮಿಕ ಶಕ್ತಿ ಕೊಟ್ಟವರು, ಬ್ಯಾಂಕ್ ವ್ಯವಸ್ಥೆ ಕೊಟ್ಟವರು ಈ ಕರಾವಳಿ ಜನ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಈ ಡಿಕೆ ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ. ನಿಮ್ಮ ಸಂಸ್ಕೃತಿ, ಇತಿಹಾಸ ದೇಶದ ಯಾವುದೇ ಭಾಗದಲ್ಲೂ ಇಲ್ಲ. ನೀವೆಲ್ಲರೂ ಕರ್ನಾಟಕ ರಾಜ್ಯದ ಆಸ್ತಿ ಎಂದು ಗುಣಗಾನ ಮಾಡಿದರು.

ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ನಾನು ನಿಮ್ಮ ಭಾಗದ ಶಾಸಕರು, ಸ್ಪೀಕರ್ ಖಾದರ್ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

Share This Article