ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಎಂಗೇಜ್‌ಮೆಂಟ್‌ ಎಷ್ಟಿದೆ: ಸಂಸದರಿಗೆ ಮೋದಿ ಪ್ರಶ್ನೆ

Public TV
2 Min Read

– ಬಿಜೆಪಿ ಸಂಸದರಿಗೆ ಕಾರ್ಯಾಗಾರ
– 8 ತಿಂಗಳ ಚಟುಟವಟಿಕೆ ಟ್ರ್ಯಾಕ್‌ ಮಾಡಿ ಕಳಪೆ ಸಾಧನೆ ಮಾಡಿದವರಿಗೆ ಕ್ಲಾಸ್‌

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ನಿಮ್ಮ ಎಂಗೇಜ್‌ಮೆಂಟ್‌ ಎಷ್ಟಿದೆ ಎಂದು ಸಂಸದರ ಬಳಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ವರದಿ ಕೇಳಿದ್ದಾರೆ.

ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಬಿಜೆಪಿ ಸಂಸದರಿಗೆ (BJP MP’s) ಕಾರ್ಯಾಗಾರ ಆಯೋಜನೆಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವುದು ಹೇಗೆ? ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹೇಗೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಯಿತು ಎಂದು ವರದಿ ತಿಳಿಸಿವೆ.

ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚುನಾವಣೆಗಳನ್ನು ಗೆಲ್ಲಲು ಅಭಿವೃದ್ಧಿ ಸಾಕಾಗುವುದಿಲ್ಲ. ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ತೊಡಗಿಸಿಕೊಳ್ಳಲು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳನ್ನು ಸಕ್ರಿಯವಾಗಿ ಬಳಸುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.

ಸಭೆಯಲ್ಲಿದ್ದ ಎಲ್ಲಾ ಸಂಸದರಿಗೆ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯ ವರದಿಗಳನ್ನು ನೀಡಲಾಯಿತು. ಈ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ನಿಷ್ಕ್ರಿಯರಾಗಿರುವ ಸಂಸದರಿಗೆ ಕ್ಲಾಸ್‌ ಮಾಡಲಾಯಿತು. ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

ಕಾರ್ಯಾಗಾರದಲ್ಲಿ ಸಂಸದರ ಸಾಮಾಜಿಕ ಮಾಧ್ಯಮ ಸೈಟ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್‌ನಲ್ಲಿ ಅವರ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಿ ಸಿದ್ಧಪಡಿಸಿದ ವರದಿಯನ್ನು ನೀಡಲಾಯಿತು. ಜನವರಿ ಮತ್ತು ಆಗಸ್ಟ್ ನಡುವಿನ ಅವಧಿಯಲ್ಲಿನ ಚಟುವಟಿಕೆಯನ್ನು ಪರಿಶೀಲಿಸಿ ಸಂಸದರನ್ನು ಸಕ್ರಿಯ, ದುರ್ಬಲ ಮತ್ತು ನಿಷ್ಕ್ರಿಯ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿತ್ತು.

ಉದಾಹರಣೆಗೆ, ಒಂದು ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಮಾಡದ ಸಂಸದರನ್ನು ‘ನಿಷ್ಕ್ರಿಯ’ ಮತ್ತು ಕೆಂಪು ಎಂದು ಟ್ಯಾಗ್ ನೀಡಲಾಗಿತ್ತು. ಒಂದು ತಿಂಗಳಲ್ಲಿ 0-60 ಪೋಸ್ಟ್‌ಗಳನ್ನು ಹೊಂದಿರುವವರನ್ನು ‘ಕಡಿಮೆ ಸಕ್ರಿಯ’ ಮತ್ತು ಹಳದಿ ಎಂದು ಟ್ಯಾಗ್ ಮಾಡಲಾಗಿತ್ತು. 60 ಕ್ಕೂ ಹೆಚ್ಚು ಪೋಸ್ಟ್‌ ಮಾಡಿದವರನ್ನು ‘ಸಕ್ರಿಯ’ ಮತ್ತು ಹಸಿರು ಎಂದು ಟ್ಯಾಗ್ ಮಾಡಲಾಗಿತ್ತು.

ಕಾರ್ಯಾಗಾರದ ಸಮಯದಲ್ಲಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಸಂಪರ್ಕಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಪ್ರಸ್ತುತಿ ನೀಡಿದರು.

Share This Article