ಗುಜರಾತ್ | ಪಾವಗಡ ಬೆಟ್ಟದ ದೇವಾಲಯದಲ್ಲಿ ಭೀಕರ ದುರಂತ; ರೋಪ್‌ವೇ ಮುರಿದು 6 ಮಂದಿ ದುರ್ಮರಣ

By
2 Min Read

ಗಾಂಧಿನಗರ: ಗುಜರಾತ್‌ನ ಪಾವಗಡ ಶಕ್ತಿಪೀಠದ ಬಳಿ ಭೀಕರ ದುರಂತ ಸಂಭವಿಸಿದೆ. ಪಾವಗಡ ರೋಪ್‌ವೇಗಾಗಿ (Pavagadh Ropeway )ನಿರ್ಮಾಣ ಸಾಮಗ್ರಿ ಸಾಗಿಸುತ್ತಿದ್ದ ಟ್ರಾಲಿ ಮುರಿದು ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ.

ಪಂಚಮಹಲ್ (Panchmahal) ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 6 ಮಂದಿ ಸಾವನ್ನಪ್ಪಿರುವುದಾಗಿ ಡಿಎಸ್‌ಪಿ ಹರ್ಷ ದುಧಾತ್ ತಿಳಿಸಿದ್ದಾರೆ. ಮೃತರ ಪೈಕಿ ಇಬ್ಬರು ಲಿಫ್ಟ್‌ ಆಪರೇಟರ್‌, ಇಬ್ಬರು ಕಾರ್ಮಿಕರು ಹಾಗೂ ಇಬ್ಬರು ಇತರ ವ್ಯಕ್ತಿಗಳು ಸೇರಿದ್ದಾರೆ.

ಪಾವಗಡ ಬೆಟ್ಟದ ದೇವಸ್ಥಾನದಲ್ಲಿ ರೋಪ್‌ವೇನ ಕೇಬಲ್‌ ತಂತಿ ತುಂಡಾಗಿ ದುರಂತ ಸಂಭವಿಸಿದೆ ಎಂದು ಗುಜರಾತ್‌ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಗುಜರಾತ್‌ ಪೊಲೀಸ್‌ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.

ಪಾವಗಡ ಬೆಟ್ಟದ ದೇವಾಲಯ (Pavagadh Hill Temple) ಸುಮಾರು 800 ಮೀಟರ್‌ ಎತ್ತರದಲ್ಲಿದೆ. ‌ಯಾತ್ರಿಕರಾಗಲಿ, ಪ್ರವಾಸಿಗರಾಗಲಿ ಇಲ್ಲಿನ ಶಿಖರ ತಲುಪಬೇಕಾದ್ರೆ ಸುಮಾರು 2,000 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯಬೇಕು. ಅಥವಾ ಕೇಬಲ್‌ ಕಾರುಗಳ ಮೂಲಕವೇ (ರೋಪ್‌ವೇ) ಹೋಗಬೇಕು. ಆದ್ದರೆ ಇಂದು ಪ್ರತಿಕೂಲ ಹವಾಮಾನದಿಂದಾಗಿ ಸಾರ್ವಜನಿಕ ಬಳಕೆಗೆ ರೋಪ್‌ವೇ ಅನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾವಗಡ ಬೆಟ್ಟವು ಕಾಳಿ ದೇವಿಗೆ ಮೀಸಲಾಗಿರುವ ದೇವಾಲಯ ಹೊಂದಿದ್ದು, ಅತ್ಯಂತ ಪ್ರಭಾವಶಾಲಿ ಶಕ್ತಿಪೀಠ ಎಂದೇ ಜನರು ನಂಬಿದ್ದಾರೆ. ಪ್ರತಿ ವರ್ಷ 25 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

Share This Article