– 2003 ರಲ್ಲಿ ಜಾಗ ಮಾರಾಟ ಮಾಡಲಾಗಿತ್ತು
– ಆಗ ಯಾವ ನಿಯಮದಡಿ ಮಾರಾಟಕ್ಕೆ ಅವಕಾಶ ಇತ್ತು?
ಡಾ.ವಿಷ್ಣುವರ್ಧನ್ (Vishnuvardhan) ಫ್ಯಾನ್ಸ್ಗೆ ಇದು ಬ್ಯಾಡ್ ನ್ಯೂಸ್. ಮತ್ತೆ ಸಮಾಧಿ ಎದ್ದೇಳುತ್ತೆ ಅಂತ ಕನಸು ಕಂಡವರಿಗೆ ಇದು ಖಂಡಿತಾ ನಿರಾಸೆ ಮಾಡುತ್ತದೆ. ಈ ನಿರಾಸೆಗೆ ಕಾರಣ ಬಾಲಣ್ಣನ ಪುತ್ರಿ ಗೀತಾ ಬಾಲಿ ಆಡಿದ ಮಾತು.
ಹೌದು. ಚಿತ್ರರಂಗದ ಚಟುವಟಿಕೆಗಳಿಗೆ ಪೂರಕವಾಗಲಿ, ಚಿತ್ರರಂಗದವರಿಗೆ ಶೂಟಿಂಗ್ಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಹಿರಿಯನಟ ಬಾಲಕೃಷ್ಣ (Balakrishna) ಅವರು ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂದಾಗ ಸರ್ಕಾರ ಕೂಡಾ ಸಾಥ್ ನೀಡಿ 20 ಎಕರೆ ಜಾಗವನ್ನ ನೀಡಿತ್ತು. ಜಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನ ವಿಧಿಸಲಾಗಿತ್ತು. ಆ ನಿಯಮಗಳು ಈಗ ಉಲ್ಲಂಘನೆಯಾಗಿದೆ ಎಂದು ಅರಣ್ಯ ಇಲಾಖೆ ಮತ್ತೆ ಆ ಜಮೀನನ್ನು ಹಿಂಪಡೆಯಲು ಆದೇಶಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಈ ಬೆನ್ನಲ್ಲೇ ಬಾಲಣ್ಣ ಪುತ್ರಿ ಗೀತಾ ಬಾಲಿ (Geetha Bali) ಆ ಜಾಗವನ್ನ ನಾನು ಬಿಟ್ಟು ಕೊಡಲು ಸಿದ್ದವಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. 2003 ರಲ್ಲೇ 10 ಎಕರೆ ಮಾರಾಟವಾದ ವೇಳೆ ನಿಯಮ ಉಲ್ಲಂಘನೆ ಆಗದೇ ಇರೋದು ಈಗ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮವಾಗಿ ಅಸಂಖ್ಯಾತ ದಾದಾ ಅಭಿಮಾನಿಗಳಿಗೆ ನೋವುಂಟು ಮಾಡಿತ್ತು. ಡಾ.ವಿಷ್ಣುವರ್ಧನ್ ಅಭಿಮಾನಿಗಳ ಭಾವನೆಗೆ ಧಕ್ಕೆ ತರಲಾಗಿತ್ತು. ಆದರೆ ಸರಕಾರದ ಅರಣ್ಯ ಇಲಾಖೆ ಈ ಜಟಾಪಟಿಯಲ್ಲಿ ಮಧ್ಯಪ್ರವೇಶ ಮಾಡಿ ಅಭಿಮಾನ್ ಸ್ಟುಡಿಯೋ ಜಾಗವನ್ನ ಹಿಂಪಡೆಯುವ ಆದೇಶ ಹೊರಡಿಸಿತ್ತು. ಇದಾದ ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.
ಸರ್ಕಾರ ಅಭಿಮಾನ್ ಸ್ಟುಡಿಯೋವನ್ನ ಮುಟ್ಟುಗೋಲು ಹಾಕಿ ಅರಣ್ಯಪ್ರದೇಶ ಅಂತಾ ಘೋಷಣೆ ಮಾಡಿದ್ದೇ ಆದಲ್ಲಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಅಲ್ಲಿ ತಮ್ಮ ನೆಚ್ಚಿನ ನಾಯಕನ ಸ್ಮಾರಕ ತಲೆಎತ್ತಿ ನಿಲ್ಲುವ ಕನಸು ಕಂಡಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ
ಸರ್ಕಾರ ಮಧ್ಯೆಪ್ರವೇಶದಿಂದ ಸಮಸ್ತ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ವಿಷ್ಣುವರ್ಧನ್ ಕುಟುಂಬಸ್ಥರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಆ ಜಾಗವನ್ನ ಅಷ್ಟು ಸುಲಭವಾಗಿ ನಾನು ಬಿಟ್ಟುಕೊಡುವುದಿಲ್ಲ. ನ್ಯಾಯಾಲಯಕ್ಕೆ ಹೋಗುತ್ತೇನೆ. ಕಾನೂನು ಹೋರಾಟ ಮಾಡುತ್ತೇನೆ ಅಂತಾ ಬಾಲಣ್ಣ ಪುತ್ರಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಈ ಜಟಾಪಟಿಗೆ ಸರ್ಕಾರ ಇತಿಶ್ರೀ ಹಾಡುತ್ತೆ ಎನ್ನುವ ಭರವಸೆ ಇಟ್ಟುಕೊಂಡಿದ್ದ ಅಭಿಮಾನಿಗಳು ಮತ್ತೆ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇದೇ ಸೆಪ್ಟಂಬರ್ 18 ರಂದು ಅವರ 75ನೇ ಜನ್ಮದಿನವನ್ನ ಆಚರಣೆ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಇದನ್ನೂ ಓದಿ: ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?
ಅಮೃತಮಹೋತ್ಸವದ ವೇಳೆ ಅಲ್ಲಿ ಅಡಿಗಲ್ಲಿಟ್ಟು ಸಮಾಧಿ ನಿರ್ಮಾಣಕ್ಕೆ ಅಂಕಿತ ಹಾಕುವ ಹಲವಾರು ಯೋಜನೆಗಳನ್ನ ಅಭಿಮಾನಿಗಳು ಮಾಡಿಕೊಂಡಿದ್ದರು. ಆದರೆ ಈಗ ಬಾಲಣ್ಣ ಪುತ್ರಿ ಸಿಡಿದೆದ್ದಿದ್ದಾರೆ. ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾನೂನು ಹೋರಾಟ ಮಾಡುತ್ತೇನೆ. ಇದರ ಹಿಂದಿರೋ ರಾಜಕೀಯ ಪ್ರಭಾವಿಗಳ ಮುಖವಾಡ ಕಳಚುತ್ತೇನೆ ಎಂದು ಸವಾಲೆಸೆದಿದ್ದಾರೆ. ಬಾಲಣ್ಣ ಕುಟುಂಬದ ಆಸ್ತಿ ವಿವಾದ ಮೇರುನಟನಿಗೆ ಗೇಣು ಜಾಗಕ್ಕೂ ಕುತ್ತು ತಂದಿದೆ.