ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

By
2 Min Read

ನವದೆಹಲಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ (Dharmasthala Case) ವಿದೇಶಿ ಫಂಡಿಂಗ್‌ (Foreign Funding) ಆರೋಪ ಕೇಳಿಬಂದ ಹಿನ್ನೆಲೆ ಜಾರಿ ನಿರ್ದೇಶನಾಲಯ (Enforcement Directorate) ತನಿಖೆಗೆ ಎಂಟ್ರಿಯಾಗಿದೆ. ಎರಡು ಎನ್‌ಜಿಓಗಳು (NGO) ಕಾನೂನನ್ನು ಉಲ್ಲಂಘಿಸಿ ವಿದೇಶಿ ಹಣವನ್ನು ಪಡೆದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದನ್ನು ಧರ್ಮಸ್ಥಳದ ವಿರುದ್ಧದ ಪಿತೂರಿಗೆ ಬಳಸಿರುವ ಸಾಧ್ಯತೆ ಇದೆ. ಇಡಿ ಅವರ ಹಣಕಾಸಿನ ವ್ಯವಹಾರದ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಇಡಿ ಅಧಿಕಾರಿಗಳು ಪೊಲೀಸರಿಂದ ದಾಖಲೆಗಳನ್ನು ಪಡೆದಿದ್ದಾರೆ. ಅಲ್ಲದೇ ವಿದೇಶಿ ಫಂಡ್ ಉಲ್ಲಂಘನೆ ಆರೋಪದ ಮೇಲೆ ಎರಡು ಎನ್‌ಜಿಓಗಳ ಖಾತೆ ವಿವರಗಳು ಮತ್ತು ವಹಿವಾಟಿನ ದಾಖಲೆಗಳ ಬಗ್ಗೆ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಎರಡು ದೂರುಗಳ ಆಧಾರದ ಮೇಲೆ ಇಡಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

ವಿಚಾರಣೆಯ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಇತರ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಅವರ ಪ್ಯಾನ್ ವಿವರಗಳು, ಖಾತೆ ಮಾಹಿತಿ ಮತ್ತು NGO ಗಳಿಗೆ ಸಂಬಂಧಿಸಿದ ಐದು ವರ್ಷಗಳ ವಹಿವಾಟು ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದೆ.

ಸೆ.1 ರಂದು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕ್ಷೇತ್ರದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ ಆಗುತ್ತಿದೆ. ಇದೆಲ್ಲ ಹೊರಗೆ ಬರಬೇಕಾದ್ರೆ ಪ್ರಕರಣವನ್ನ ರಾಜ್ಯ ಸರ್ಕಾರ ಎನ್‍ಐಎ (NIA) ಅಥವಾ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.

ಧರ್ಮಸ್ಥಳದ ವಿಚಾರದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬೇರೆ ಬೇರೆ ಕಡೆಯಿಂದ ವಿದೇಶದಿಂದ ಫಂಡ್ ಬಂದಿದೆ. ಯೂಟ್ಯೂಬರ್‌ಗಳಿಗೆ ವಿವಿಧ ಕಡೆಯಿಂದ ಫಂಡ್ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಆಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಹೇಳಿಕೊಂಡಿರುವಂತೆ ಯಾವುದೇ ವಿದೇಶಿ ಫಂಡ್‌ ಬಗ್ಗೆ ತನಗೆ ತಿಳಿದಿಲ್ಲ. ತನಿಖೆಯಿಂದ ಅದು ಹೊರಬರಲಿ. ರ‍್ಯಾಲಿ ಮಾಡಲು ಬಿಜೆಪಿಗೆ ಹಣವಿದೆ. ಹಣ ಎಲ್ಲಿಂದ ಬರುತ್ತಿದೆ? ಅವರಿಗೆ ಯಾರು ಹಣ ನೀಡುತ್ತಿದ್ದಾರೆ? ಪ್ರತಿಯೊಂದು ವಿಷಯವನ್ನು ರಾಜಕೀಯವಾಗಿ ಬಳಸಬಾರದು ಎಂದಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್-‌ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ

Share This Article