ಇಂದು ಹಲವೆಡೆ ಗಣೇಶನ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಗಣೇಶನಿಗೆ ವಿಭಿನ್ನವಾದ ರವೆ ಒಬ್ಬಟ್ಟನ್ನು ಪ್ರಸಾದವಾಗಿ ಅರ್ಪಿಸಿ.
ಸಾಮಾನ್ಯವಾಗಿ ಎಲ್ಲೆಡೆ ಗಣೇಶನಿಗೆ ನೈವೇದ್ಯವಾಗಿ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇಂದು ವಿಭಿನ್ನವಾಗಿ ರವೆ ಒಬ್ಬಟ್ಟನ್ನು ಮಾಡಿ. ಹೂರಣದ ಒಬ್ಬಟ್ಟು ಮಾಡುವಂತೆಯೇ ರವೆ ಒಬ್ಬಟ್ಟು ಮಾಡುತ್ತಾರೆ. ಆದರೆ ಬಳಸುವ ಸಾಮಗ್ರಿಗಳು ಬೇರೆಯಷ್ಟೇ.
ಬೇಕಾಗುವ ಸಾಮಗ್ರಿಗಳು:
ರವೆ
ಗೋಧಿ ಹಿಟ್ಟು
ಎಣ್ಣೆ
ಉಪ್ಪು
ನೀರು
ಸಕ್ಕರೆ
ರವೆ
ತುಪ್ಪ
ಹಾಲು
ಏಲಕ್ಕಿ ಪುಡಿ
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ರವೆ, ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿ. ಅದಕ್ಕೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಕೊನೆಗೆ ಹಿಟ್ಟಿಗೆ ಎಣ್ಣೆ ಹಚ್ಚಿ, ಮೇಲೆ ಪಾತ್ರೆಯೊಂದನ್ನು ಮುಚ್ಚಿ ಕನಿಷ್ಠ 30 ನಿಮಿಷ ಬಿಡಿ.
ಇನ್ನೊಂದು ಬಾಣಲೆಗೆ ಹಾಲು ಹಾಕಿ ಕುದಿಯಲು ಬಿಡಿ, ಸ್ವಲ್ಪ ಹೊತ್ತಿನ ನಂತರ, ಅದಕ್ಕೆ ರವೆ ಹಾಕಿ ಕಲಸಿ. ರವೆ ಚೆನ್ನಾಗಿ ಬೇಯ್ದ ಮೇಲೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ. ಸಕ್ಕರೆ ಕರಗಿದ ನಂತರ ತುಪ್ಪ ಹಾಕಿ ಹುರಿದುಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ತಣ್ಣಗಾದ ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ಇಟ್ಟುಕೊಳ್ಳಿ.
ಒಬ್ಬಟ್ಟು ಮಾಡೋದು ಹೇಗೆ?
ಚಪಾತಿ ಹಿಟ್ಟನ್ನು ಚಿಕ್ಕದ್ದಾಗಿ ಲಟ್ಟಿಸಿಕೊಂಡು ಅದರ ಮಧ್ಯಕ್ಕೆ ರವೆ ಹೂರಣವನ್ನು ಇಟ್ಟುಕೊಂಡು ಸುತ್ತಲೂ ಹಿಟ್ಟಿನಿಂದ ಕವರ್ ಮಾಡಿಕೊಳ್ಳಿ. ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಅಥವಾ ಹಾಳೆಯ ಮೇಲೆ ಚಪಾತಿ ರೀತಿಯಲ್ಲಿ ಚಿಕ್ಕದಾಗಿ ಮಾಡಿಕೊಳ್ಳಿ.
ಕೊನೆಗೆ ಕಾದ ತವೆಯ ಮೇಲೆ ತುಪ್ಪ ಹಚ್ಚಿ, ಒಬ್ಬಟ್ಟನ್ನು ಬೇಯಿಸಿಕೊಳ್ಳಿ.