ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

By
2 Min Read

ಟೋಕಿಯೊ: ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಪಾನ್‌ಗೆ 2 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ಟೋಕಿಯೊಗೆ ಬಂದಿಳಿದಿದ್ದಾರೆ.

ಇಂದು ಮತ್ತು ನಾಳೆ ಜಪಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ವಾಸ್ತವ್ಯದ ಸಮಯದಲ್ಲಿ 15 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

ಇಂದು ಬೆಳಗ್ಗೆ 10:30 ರಿಂದ 11:10 ರ ವರೆಗೆ ಮೋದಿ ಅವರು ಜಪಾನ್ ಮತ್ತು ಭಾರತೀಯ ಕೈಗಾರಿಕೆಗಳ ನಾಯಕರೊಂದಿಗೆ ವ್ಯಾಪಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:10 ರ ವರೆಗೆ ಜಪಾನಿನ ಗಣ್ಯರನ್ನು ಭೇಟಿ ಮಾಡಲಿದ್ದಾರೆ. ನಂತರ ಮಧ್ಯಾಹ್ನ 2:30 ರಿಂದ ಸಂಜೆ 5:15 ರ ವರೆಗೆ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದು ಎರಡೂ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ. ಎರಡು ದಿನಗಳ ಭೇಟಿಯ ಸಮಯದಲ್ಲಿ ಅವರು ಮುಂದಿನ ಪೀಳಿಗೆಯ E10 ಶಿಂಕನ್ಸೆನ್ ಬುಲೆಟ್ ರೈಲುಗಳನ್ನು ಭಾರತದಲ್ಲಿ ತಯಾರಿಸಲು ಪಾಲುದಾರಿಕೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಜಪಾನ್ ಬಳಿಕ ಚೀನಾಗೆ ಮೋದಿ ತೆರಳಲಿದ್ದಾರೆ. ಇದನ್ನೂ ಓದಿ: ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ‌ 324 ಸ್ಥಾನ ಗೆಲ್ಲುವ ಸಾಧ್ಯತೆ

ಪ್ರಧಾನಿಯವರ ಪ್ರವಾಸದ ಮೊದಲ ದಿನದಂದು ನಡೆಯಲಿರುವ ಮಾತುಕತೆಯಲ್ಲಿ, ಭಾರತದಲ್ಲಿ ಜಪಾನ್ ತನ್ನ ಹೂಡಿಕೆ ಗುರಿಯನ್ನು ದ್ವಿಗುಣಗೊಳಿಸುವ ಪ್ರತಿಜ್ಞೆ ಮಾಡುವ ನಿರೀಕ್ಷೆಯಿದೆ. ವ್ಯಾಪಾರ, ಹೂಡಿಕೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಎರಡೂ ಕಡೆಯವರು ಹಲವಾರು ಒಪ್ಪಂದಗಳನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಟೋಕಿಯೊದಲ್ಲಿ ಜಪಾನಿನ ಕೈಗಾರಿಕೋದ್ಯಮಿಗಳು ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಪ್ರವಾಸದ ಎರಡನೇ ದಿನದಂದು, ಪ್ರಧಾನ ಮಂತ್ರಿ ಮೋದಿ ಮತ್ತು ಇಶಿಬಾ ಅವರು ಸೆಂಡೈ ನಗರಕ್ಕೆ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸಿ ಸೆಮಿಕಂಡಕ್ಟರ್ ಸೌಲಭ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಭೇಟಿಯ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಆ.31 ಮತ್ತು ಸೆ.1 ರಂದು ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ಟಿಯಾಂಜಿನ್ ನಗರಕ್ಕೆ ಪ್ರಯಾಣಿಸಲಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ಸುಂಕಗಳ ನೀತಿಗಳಿಂದಾಗಿ ಭಾರತ-ಯುಎಸ್ ಸಂಬಂಧಗಳಲ್ಲಿ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ಮೋದಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾರೆ.

Share This Article