ರಾಜ್ಯದ ಹಲವೆಡೆ ವರ್ಷಧಾರೆ – ಲಿಂಗನಮಕ್ಕಿ ಜಲಾಶಯದಿಂದ 50,000 ಕ್ಯೂಸೆಕ್ ನೀರು ರಿಲೀಸ್‌

By
1 Min Read

ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಗಡಿ ಜಿಲ್ಲೆ ಬೀದರ್‌ನಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿರುವ ಕೆರೆ ಹೊಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಗ್ರಾಮದ ಕೆಲವು ಮನೆಗಳಿಗೂ ನೀರು ನುಗ್ಗಿದೆ. ಚಿಟ್ಟವಾಡಿ ಬಳಿ ರಸ್ತೆಯ ಮೇಲೆ ಮೊಣಕಾಲುದ್ದ ನೀರು ನಿಂತಿವೆ. ಬೀದರ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೀದರ್‌ನಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕಲಬುರಗಿಯ ಜೇವರ್ಗಿ ಪಟ್ಟಣದಲ್ಲಿ ಮಳೆ ನೀರು ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿದೆ. ಯಾದಗಿರಿಯಲ್ಲಿ ನೀರಿನಲ್ಲಿ ಸಿಲುಕಿದ್ದ ಹಸುವೊಂದನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಹಿನ್ನಲೆ ಅಂಗನವಾಡಿಯಿಂದ ಪ್ರೌಢ ಶಾಲೆಯವರೆಗೆ ಜಿಲ್ಲಾಡಳಿತ ರಜೆಘೋಷಿಸಿದೆ.

ಉಡುಪಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತ ಹೊನ್ನಾವರದ ಗೇರುಸೊಪ್ಪ ಹಾಗೂ ಲಿಂಗನಮಕ್ಕಿ ಆಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲಾಗಿದೆ.

ಗೇರುಸೊಪ್ಪ ಆಣೆಕಟ್ಟಿನಿಂದ 13,192 ಕ್ಯೂಸೆಕ್, ಲಿಂಗನಮಕ್ಕಿ ಜಲಾಶಯದಿಂದ 50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜೋಗ ಜಲಪಾತ ಕಣ್ಮನ ಸೆಳೀತಿದೆ.

Share This Article