ವಾರ್ಷಿಕ ಫಾಸ್ಟ್ಯಾಗ್ ಪಾಸ್ ಪಡೆಯುವುದು ಹೇಗೆ? ಯಾರೆಲ್ಲಾ ಅರ್ಹರು?

By
5 Min Read

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಇತಿಹಾಸದಲ್ಲಿ ಕ್ರಾಂತಿಕಾರಕ ಯೋಜನೆಯಾಗಿರುವ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ಅನ್ನು (Fastag Annual Pass) ಆಗಸ್ಟ್‌ 15ರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹೌದು, ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಕೆಲ ದಿನಗಳ ಹಿಂದೆ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ ಯೋಜನೆಯನ್ನು ಘೋಷಿಸಿದ್ದರು. ಅದು ಆಗಸ್ಟ್‌ 15ರಿಂದ ಶುರುವಾಗಿದ್ದು, ಇನ್ನು ಮುಂದೆ ವರ್ಷಕ್ಕೊಮ್ಮೆ ಹಣ ಪಾವತಿಸಿ, ಚಿಂತೆಯಿಲ್ಲದೆ ಹೆದ್ದಾರಿಯಲ್ಲಿ ಪ್ರಯಾಣಿಸಬಹುದಾಗಿದೆ.

ಹಾಗಿದ್ರೆ ಏನಿದು ವಾರ್ಷಿಕ ಪಾಸ್‌ ಯೋಜನೆ? ದುಡ್ಡು ಎಷ್ಟು? ಟ್ರಿಪ್‌ಗಳನ್ನು ಹೇಗೆ ಲೆಕ್ಕ ಹಾಕುತ್ತಾರೆ? ಯಾವೆಲ್ಲಾ ರಸ್ತೆಯಲ್ಲಿ ವಾಹನ ಸವಾರರು ಓಡಾಡಬಹುದು? ವಾರ್ಷಿಕ ಪಾಸ್‌ ಪಡೆಯುವುದು ಹೇಗೆ? ಯಾರೆಲ್ಲ ಅರ್ಹರು ಎಂಬ ಗೊಂದಲಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

ಏನಿದು ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ಯೋಜನೆ?
ಆಗಸ್ಟ್ 15 ರಿಂದ ದೇಶಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಈ ಯೋಜನೆ ಜಾರಿಗೆ ಬಂತು. ಹಿಂದೆ ವಾಹನ ಚಾಲಕರು ಪ್ರತಿ ಟೋಲ್ ಗೇಟ್‌ನಲ್ಲಿ ನಿಲ್ಲಿಸಿ ಟೋಲ್‌ ಪಾವತಿಸಬೇಕಾಗಿತ್ತು. ಆದರೆ ಫಾಸ್ಟ್ಯಾಗ್‌ ಬಂದ ಮೇಲೆ ಇದು ಡಿಜಿಟಲ್ ಆಗಿ ಮಾರ್ಪಟ್ಟಿದೆ. ಇದೀಗ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ ಮೂಲಕ ಟೋಲ್‌ ಪಾವತಿ ಇನ್ನೂ ಸುಲಭವಾಗಲಿದೆ.

ವಾರ್ಷಿಕ ಪಾಸ್ ಪಡೆಯುವುದು ಹೇಗೆ?
ನಿಮ್ಮ ವಾಹನವು ಮಾನ್ಯವಾದ ಫಾಸ್ಟ್ಯಾಗ್‌ ಹೊಂದಿರಬೇಕು. ನಂತರ ನೀವು ರಾಜಮಾರ್ಗಯಾತ್ರೆ ಅಪ್ಲಿಕೇಶನ್‌ನಲ್ಲಿ ಅಥವಾ NHAIನ ಅಧಿಕೃತ ವೆಬ್‌ಸೈಟ್‌ನಲ್ಲಿ 3,000 ರೂ. ಪಾವತಿಸುವ ಮೂಲಕ ಪಾಸ್ ಅನ್ನು ಖರೀದಿಸಬಹುದು. ಪಾವತಿ ಮಾಡಿದ 2 ಗಂಟೆಗಳ ಒಳಗೆ ಪಾಸ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

ವಾರ್ಷಿಕ ಪಾಸ್‌ನ ಪ್ರಯೋಜನಗಳೇನು?
ವಾರ್ಷಿಕ ಪಾಸ್‌ನೊಂದಿಗೆ, ಪ್ರತಿ ಬಾರಿಯೂ ರೀಚಾರ್ಜ್ ಮಾಡುವ ಮತ್ತು ಹಣವನ್ನು ಪಾವತಿಸುವ ತೊಂದರೆ ಇರುವುದಿಲ್ಲ. ನೀವು ಒಂದು ವರ್ಷದಲ್ಲಿ ಸುಮಾರು 200 ಟ್ರಿಪ್‌ಗಳಿಗೆ ನಿಲ್ಲದೆ ಪ್ರಯಾಣಿಸಬಹುದು. ವಾರ್ಷಿಕವಾಗಿ ಅದನ್ನು ತೆಗೆದುಕೊಳ್ಳುವುದರಿಂದ ಬಹಳಷ್ಟು ಹಣ ಉಳಿತಾಯವಾಗುತ್ತದೆ.

ಭಾರತದಲ್ಲಿ ಪ್ರಸ್ತುತ 8 ಕೋಟಿಗೂ ಹೆಚ್ಚು ಫಾಸ್ಟ್ಯಾಗ್‌ ಬಳಕೆದಾರರಿದ್ದಾರೆ. ಟೋಲ್‌ಗಳಲ್ಲಿ 98%ರಷ್ಟು ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತಿದೆ. ಈ ವ್ಯವಸ್ಥೆಯು ಟೋಲ್‌ಗೇಟ್‌ಗಳಲ್ಲಿ ವಾಹನಗಳು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಈ ವಾರ್ಷಿಕ ಪಾಸ್ ಒಂದು ವರ್ಷ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಮಾನ್ಯವಾಗಿರುತ್ತದೆ. ಮಾನ್ಯ ಫಾಸ್ಟ್ಯಾಗ್ ಹೊಂದಿರುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ಇದು ಅನ್ವಯಿಸುತ್ತದೆ.

ವಾರ್ಷಿಕ ಪಾಸ್ ಅನ್ನು ಎಲ್ಲಿ ಬಳಸಬಹುದು?
ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಟೋಲ್ ಫ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇ ರಾಜ್ಯ ಅಥವಾ ಖಾಸಗಿಯಾಗಿದ್ದರೆ, ವಾರ್ಷಿಕ ಫಾಸ್ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶಕ್ಕೆ ಅವಕಾಶ ದೊರೆಯುವುದಿಲ್ಲ.

ಪಾಸ್ ಅನ್ನು ಎಲ್ಲಿ ಖರೀದಿಸಬಹುದು?
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಗಾಗಿ ಮೀಸಲಾದ ಲಿಂಕ್ ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ಲಿಂಕ್ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಅಧಿಕೃತ ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿರುತ್ತದೆ.

ಪಾಸ್ ಅನ್ನು ಆಕ್ಟಿವೇಟ್‌ ಮಾಡುವುದು ಹೇಗೆ?
ಪಾಸ್ ಅನ್ನು ಆಕ್ಟಿವೇಟ್ ಮಾಡಲು ನಿಮ್ಮ ವಾಹನ ಮತ್ತು ಫಾಸ್ಟ್‌ಟ್ಯಾಗ್ ಅನ್ನು ಪರಿಶೀಲಿಸಬೇಕಾಗುತ್ತದೆ. ತದನಂತರ 3,000 ರೂ. ಪಾವತಿಸಬೇಕಾಗುತ್ತದೆ. ಪೇಮೆಂಟ್ ಮಾಡಿದ ಎರಡು ಗಂಟೆಗಳಲ್ಲಿ ಅದು ಆಕ್ಟಿವೇಟ್‌ ಆಗುತ್ತದೆ. ತದನಂತರ ಪಾಸ್ ಅನ್ನು ಒಂದು ವರ್ಷದವರೆಗೆ ಬಳಸಬಹುದು. ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಎಕ್ಸ್‌ಪ್ರೆಸ್‌ವೇಗಳು, ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ನಿಯಮಿತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರರ ಶುಲ್ಕಗಳು ಅನ್ವಯಿಸಬಹುದು.

ಫಾಸ್ಟ್ಯಾಗ್ ಹೊಂದಿರುವವರು ಮತ್ತೆ ಹೊಸದಾಗಿ ಖರೀದಿಸಬೇಕಾ?
ಈಗಾಗಲೇ ತಮ್ಮ ವಾಹನಗಳಲ್ಲಿ ಫಾಸ್ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್ಯಾಗ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಬಳಿ ಇರುವ ಪಾಸ್‌ನಲ್ಲಿಯೇ ಈ ಪಾಸ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ವಾರ್ಷಿಕ ಪಾಸ್ ಪಡೆಯಲು ಫಾಸ್ಟ್ಯಾಗ್‌ನ KYC ಅತ್ಯಗತ್ಯವಾಗಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.

ವಾರ್ಷಿಕ ಪಾಸ್ ಬಳಸಿ ಎಷ್ಟು ಬಾರಿ ಪ್ರಯಾಣಿಸಹುದು:
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಅಥವಾ 200 ಟ್ರಿಪ್‌ಗಳಿಗೆ ಅನುಮತಿ ನೀಡುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್‌ಗಳು ಪೂರ್ಣಗೊಂಡ ನಂತರ, ಇದು ಮೊದಲಿನಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ವಾರ್ಷಿಕ ಫಾಸ್ಟ್ಯಾಗ್ ಪಾಸ್‌ ಪಡೆಯಲು ಯಾರು ಅರ್ಹರಲ್ಲ?
ನಿಮ್ಮ ಫಾಸ್ಟ್ಯಾಗ್ ಅನ್ನು ಚಾಸಿಸ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿದ್ದರೆ ನಿಮಗೆ ಪಾಸ್ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ, ನೀವು ವಾಹನ ನೋಂದಣಿ ಸಂಖ್ಯೆಯನ್ನು (VRN) ನವೀಕರಿಸಬೇಕಾಗುತ್ತದೆ. ಅಲ್ಲದೆ, ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.

ವಾರ್ಷಿಕ ಪಾಸ್ ಖರೀದಿಯಿಂದ ಆಗುವ ಪ್ರಯೋಜನಗಳೇನು?
ವಾರ್ಷಿಕ ಫಾಸ್ಟ್ಯಾಗ್ ಪಾಸ್‌ನಿಂದ ಟೋಲ್ ತೆರಿಗೆಯಲ್ಲಿ ರೂ. 5,000 ರಿಂದ 7,000 ರೂ.ವರೆಗೆ ಉಳಿಸಬಹುದು. ಇದಲ್ಲದೆ, ಪ್ರವಾಸದ ಮಧ್ಯದಲ್ಲಿ ರೀಚಾರ್ಜ್ ಖಾಲಿಯಾದರೂ ಚಿಂತಿಸಬೇಕಾದ ಅಗತ್ಯ ಇರಲ್ಲ.

ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಬಹುದೇ?
ಇಲ್ಲ. ಹಾಗೆ ಮಾಡುವುದರಿಂದ ನಿಮ್ಮ ಪಾಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಬಹುದು.

ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಖರೀದಿಸಿದ ನಂತರ, ಅದು ನಿಮ್ಮ ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಖಾತೆ ಮತ್ತು ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಆಗುತ್ತದೆ. ಪಾಸ್ 200 ಟೋಲ್ ವಹಿವಾಟುಗಳನ್ನು ಅನುಮತಿಸುತ್ತದೆ. ಅಥವಾ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಇದು ಮಾನ್ಯವಾಗಿರುತ್ತದೆ. ನೀವು ಪ್ರತಿ ಬಾರಿ NHAI ಅಥವಾ MoRTH ನಿರ್ವಹಿಸುವ ಅರ್ಹ ಟೋಲ್ ಪ್ಲಾಜಾದ ಮೂಲಕ ಹಾದು ಹೋದಾಗ, ನಿಮ್ಮ ವಾರ್ಷಿಕ ಮಿತಿಯಿಂದ ಒಂದು ಟ್ರಿಪ್ ಅನ್ನು ಕಡಿತಗೊಳಿಸಲಾಗುತ್ತದೆ.

200-ಟ್ರಿಪ್ ಮಿತಿ ಅಥವಾ ಒಂದು ವರ್ಷದ ಅವಧಿಯನ್ನು ತಲುಪಿದ ನಂತರ, ನಿಮ್ಮ ಫಾಸ್ಟ್ಯಾಗ್ ಖಾತೆಯು ಸ್ವಯಂಚಾಲಿತವಾಗಿ ನಿಯಮಿತ ಪೇ-ಪರ್-ಯೂಸ್ ಮಾದರಿಗೆ ಹಿಂತಿರುಗುತ್ತದೆ. ಪಾಸ್ ಅನ್ನು ವರ್ಗಾಯಿಸಲಾಗುವುದಿಲ್ಲ, ಮರುಪಾವತಿಸಲಾಗುವುದಿಲ್ಲ ಮತ್ತು ರಾಷ್ಟ್ರೀಯ ಹೆದ್ದಾರಿ ಅಥವಾ ಯೋಜನೆಯಿಂದ ಒಳಗೊಳ್ಳಲ್ಪಟ್ಟ ಎಕ್ಸ್‌ಪ್ರೆಸ್‌ವೇ ನೆಟ್‌ವರ್ಕ್‌ನ ಹೊರಗಿನ ಟೋಲ್‌ಗಳಲ್ಲಿ ಬಳಸಲಾಗುವುದಿಲ್ಲ. 200 ಟ್ರಿಪ್ ಅಥವಾ 1 ವರ್ಷದ ಅವಧಿ ಮುಗಿದ ಬಳಿಕ ಮತ್ತೆ ಚಾಲಕ ಅದನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ ಆತ ಮತ್ತೆ 3000 ರೂ. ಪಾವತಿಸಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ನವೀಕರಿಸಬೇಕಾಗುತ್ತದೆ.

ಒಂದೊಂದು ಟೋಲ್ ಗೆ ಒಂದೊಂದು ಟ್ರಿಪ್ ಎಂದು ಲೆಕ್ಕ ಹಾಕಲಾಗುತ್ತದೆ. ಒಂದು ಸ್ಥಾನದಿಂದ ಮತ್ತೊಂದು ಗಮ್ಯ ಸ್ಥಾನದ ನಡುವೆ 4 ಟೋಲ್ ಗಳು ಬಂದರೆ ಆಗ ಅದನ್ನು 4 ಟ್ರಿಪ್ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.‌

ಖಾಸಗಿ ಟೋಲ್‌ಗೆ ಅನ್ವಯವಾಗಲ್ಲ:
ವಾರ್ಷಿಕ ಟೋಲ್‌ ಫಾಸ್ಟ್ಯಾಗ್‌ ಪಾಸ್‌ ಕೇವಲ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಹೆದ್ದಾರಿಗಳಿಗೆ ಹಾಗೂ ಬೆಂಗಳೂರಿನ ನೈಸ್‌ನಂಥ ಖಾಸಗಿ ಹೆದ್ದಾರಿಗೆ ಅನ್ವಯವಾಗಲ್ಲ. ರಾಜ್ಯ ಹೆದ್ದಾರಿ ಹಾಗೂ ಖಾಸಗಿ ಹೆದ್ದಾರಿಗಳಲ್ಲಿ ಸಂಚರಿಸುವವರು ಎಂದಿನ ಟೋಲ್‌ ದರವನ್ನೇ ಪಾವತಿಸಬೇಕು ಎಂದು ಹೇಳಲಾಗಿದೆ. ಈ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಯಾವ ರಾಜ್ಯದಲ್ಲಿ ಹೆಚ್ಚು ಪಾಸ್‌ ಮಾರಾಟ?
ಹೊಸದಾಗಿ ಪರಿಚಯಿಸಲಾದ ಫಾಸ್ಟ್ಯಾಗ್‌ ವಾರ್ಷಿಕ ಪಾಸ್ ಯೋಜನೆ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಈ ಪಾಸ್‌ ಅನ್ನು ಪಡೆದುಕೊಂಡಿದ್ದಾರೆ ಎಂದು NHAI ತಿಳಿಸಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು ವಾರ್ಷಿಕ ಪಾಸ್‌ ಖರೀಸಿಲಾಗಿದೆ. ತಮಿಳುನಾಡು ಬಳಿಕ ಕರ್ನಾಟಕ ಮತ್ತು ಹರಿಯಾಣದಲ್ಲಿ ಹೆಚ್ಚು ಫಾಸ್ಟ್ಯಾಗ್‌ ವಾರ್ಷಿಕ ಪಾಸ್ ಮಾರಾಟವಾಗಿದೆ. ಈ ಮೂಲಕ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಟೋಲ್ ಪ್ಲಾಜಾಗಳಲ್ಲಿ ಗರಿಷ್ಠ ವಹಿವಾಟುಗಳು ದಾಖಲಾಗಿವೆ ಎಂದು NHAI ದೃಢಪಡಿಸಿದೆ.

Share This Article