ಸಾರಿಗೆ ಮುಷ್ಕರ | ಇದು ಪಾಪರ್‌ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್‌ ವಾಗ್ದಾಳಿ

By
2 Min Read

– ಕೋವಿಡ್‌ ವೇಳೆ ಬೇರೆ ರಾಜ್ಯಗಳಲ್ಲಿ ಸಂಬಳವೇ ಕೊಟ್ಟಿರಲಿಲ್ಲ, ನಾವು ಕೊಟ್ಟಿದ್ವಿ; ತಿರುಗೇಟು

ಬೆಂಗಳೂರು: ಈ ಸರ್ಕಾರ ಪಾಪರ್ ಆಗಿದೆ, ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯದೇ ನೌಕರರ ಬೇಡಿಕೆ ಈಡೇರಿಸಬೇಕು ಅಂತ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಆಗ್ರಹ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಾರಿಗೆ ನೌಕರರ ಹೋರಾಟ ನಡೆಯುತ್ತಿದೆ. ಈ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಅಂತ ಹೇಳಿದ್ರು. ಇವತ್ತು ಫ್ರೀ ಬಸ್ (Free Bus) ಕಟ್ ಆಗಿದೆ. ಇವರು ಹೇಳ್ತಿದ್ದರು ಸರ್ಕಾರ ನಾವು ಪಾಪರ್ ಆಗಿಲ್ಲ. ಹಣ ನಮ್ಮ ಬಳಿ ಕೊಳೆಯುತ್ತಿದೆ. ಖಜಾನೆ ತುಂಬಿ ಆಚೆ ಹೋಗ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ರು. ಮಿಸ್ಟರ್ ಸಿದ್ದರಾಮಯ್ಯ (Siddaramaiah) ಅವರೇ.. ಯಡಿಯೂರಪ್ಪ ಸಿಎಂ ಆಗಿದ್ದಾಗ, ನಾನು ಸಾರಿಗೆ ಮಂತ್ರಿ ಆಗಿದ್ದಾಗ 15% ಸಂಬಳ ಜಾಸ್ತಿ ಮಾಡಿದ್ವಿ. ಅಂದೇ ಸುಮಾರು 480 ಕೋಟಿ ಹಣ ಕೊಟ್ಟಿದ್ವಿ. ಸಾರಿಗೆ ನೌಕರರ ಅವರ ಎಲ್ಲಾ ಬೇಡಿಕೆ ನಾವು ತೀರಿಸಿದ್ದೇವೆ ಅಂತ ಸರ್ಕಾರಕ್ಕೆ ತಿರುಗೇಟು ಕೊಟ್ಟರು.

ಕೋವಿಡ್‌ ವೇಳೆ ಬಿಜೆಪಿ ಅವರು ಹೈಕ್ ಮಾಡಿಲ್ಲ ಅಂತ ಹೇಳ್ತಾರೆ. ಸಿದ್ದರಾಮಯ್ಯ ಅವರೇ ಬೇರೆ ರಾಜ್ಯಗಳಲ್ಲಿ ಸಂಬಳವೇ ಕೊಟ್ಟಿರಲಿಲ್ಲ. ನಾವು ಸಂಬಳ ಕೊಟ್ಟಿದ್ವಿ. ಕೋವಿಡ್ ಕಾರಣ ಹೈಕ್ ಮಾತ್ರ ಕೊಟ್ಟಿರಲಿಲ್ಲ. ಇಡೀ ವಿಶ್ವದಲ್ಲಿ ಯಾರು ಹೈಕ್ ಕೊಟ್ಟಿರಲಿಲ್ಲ. ಅದನ್ನ ಇಟ್ಟುಕೊಂಡು ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ

ನಾವು ಆಗ ಹೈಕ್ ಕೊಟ್ಟಿರಲಿಲ್ಲ. ಈಗ ನೀವು ಕೊಡಿ, ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯಬೇಡಿ. ನೌಕರರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲ ಇದೆ. ಸಿಎಂ ಸಿದ್ದರಾಮಯ್ಯ ನಿದ್ರೆ ಮಾಡೋದು ಬಿಟ್ಟು ನೌಕರರ ಸಭೆ ಮಾಡಿ ಸಮಸ್ಯೆ ಪರಿಹಾರ ಮಾಡಿ. ನಿಮ್ಮಿಂದ ಸಮಸ್ಯೆ ಪರಿಹಾರ ಮಾಡಲು ಆಗದೇ ಹೋದ್ರೆ ಅಧಿಕಾರ ಬಿಟ್ಟು ಹೋಗಿ ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ – ನಿಮ್ಮ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

ಜನರಿಗೆ ಈ ಸರ್ಕಾರ ಸಮಸ್ಯೆ ಕೊಡ್ತಿದೆ. ಈ ಶಾಪ ನಿಮಗೆ ತಟ್ಟುತ್ತದೆ. ಇದು ಪಾಪರ್‌ ಸರ್ಕಾರ. ನೌಕರರ ಬೇಡಿಕೆ ಸರ್ಕಾರ ಈಡೇರಿಸಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ – ನಮ್ಮ ಮೆಟ್ರೋಗೆ ಜನವೋ ಜನ

Share This Article