ನಟ ಪ್ರಥಮ್‌ಗೆ ಜೀವ ಬೆದರಿಕೆ ಕೇಸ್ – ಆರೋಪಿಗಳಾದ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು

By
2 Min Read

ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರಘು ಹಾಗೂ ಯಶಸ್ವಿನಿಗೆ ದೊಡ್ಡಬಳ್ಳಾಪುರದ (Doddaballapur) ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಎ1 ಆರೋಪಿ ರೌಡಿಶೀಟರ್ ಬೇಕರಿ ರಘು ಹಾಗೂ ಎ2 ಆರೋಪಿ ಯಶಸ್ವಿನಿ ಗುರುವಾರ (ಜು.31) ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ವಿಚಾರಣೆಗಾಗಿ ಹಾಜರಾಗಿದ್ದರು. ಬಳಿಕ ದೊಡ್ಡಬಳ್ಳಾಪುರದ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ಸ್ವೀಕರಿಸಿದ್ದ ನ್ಯಾಯಾಲಯ 3 ಗಂಟೆಗೆ ತೀರ್ಪು ಕಾಯ್ದಿರಿಸಿತ್ತು. ಆನಂತರ ಜಾಮೀನು ಮಂಜೂರು ಮಾಡಿದೆ.ಇದನ್ನೂ ಓದಿ: ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವ್ರಿಗೆ ಶಿಕ್ಷೆ ಆಗ್ಬೇಕು: ರಾಕ್‍ಲೈನ್ ವೆಂಕಟೇಶ್

ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
ಜುಲೈ 22ರ ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್ ಬಂದಿದ್ದರು. ಈ ವೇಳೆ ಪ್ರಥಮ್‌ರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದು ಹಲವು ದಿನಗಳ ನಂತರ ಖುದ್ದು, ಪ್ರಥಮ್ ನೇರವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಪ್ರಥಮ್ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಥಮ್ ನೀಡಿದ ದೂರಿನಲ್ಲೇನಿದೆ?
ಜುಲೈ 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ಅವರು ನನಗೆ ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು 3:50ಕ್ಕೆ ನಾನು ವಾಪಸ್ ಬರುವ ವೇಳೆ ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಅಪರಿಚಿತರು ನನ್ನ ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ (ಗ್ರಾಮದ ಹೆಸರು ತಿಳಿದಿರುವುದಿಲ್ಲ. ಸ್ಥಳವನ್ನು ಗುರ್ತಿಸುತ್ತೇನೆ) ಕರೆದೊಯ್ದಿದ್ದರು. ದರ್ಶನ್ ಅವರನ್ನ ಕುರಿತು, ನನ್ನ ಬಾಸ್ ಬಗ್ಗೆ ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರ ಬಳಿ ಇದ್ದ ಡ್ಯಾಗರ್ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿದ್ದರು. ಇವರು ನನ್ನ ಬಳಿ ಗಲಾಟೆ ಮಾಡುವಾಗ, ಜೈಲಿನಲ್ಲಿ ದರ್ಶನ್ ಜೊತೆ ಇದ್ದ ಬ್ಯಾರಕ್ ಪೋಟೋವನ್ನ ತೋರಿಸಿದ್ದರು. ಆ ನಂತರ ಅಲ್ಲಿಂದ ಬಹಳ ಉಪಾಯದಿಂದ ಪ್ರಾಣ ಉಳಿಸಿಕೊಂಡು ಬಂದಿದ್ದೆ ದೊಡ್ಡ ವಿಚಾರ. ನನ್ನ ಜೊತೆ ಇದ್ದ ಸ್ನೇಹಿತರಾದ ಮಹೇಶ್, ಪ್ರಮೋದ್ ಮತ್ತು ಚಾಲಕ ಪ್ರಕಾಶ್ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ನನಗೆ ಜೀವ ಭಯವಿರುವುದರಿಂದ ರಕ್ಷಣೆ ನೀಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.ಇದನ್ನೂ ಓದಿ: ಭಾರತದ ಮೇಲೆ 25% ಟ್ಯಾರಿಫ್‌ ಹಾಕಿ ಪಾಕಿಸ್ತಾನ ಜೊತೆ ಅಮೆರಿಕ ತೈಲ ಒಪ್ಪಂದ

Share This Article