ಆ.15 ರೊಳಗೆ ಹೆಬ್ಬಾಳ ಜಂಕ್ಷನ್ ಉದ್ಘಾಟನೆ: ಡಿಕೆಶಿ

By
2 Min Read

ಬೆಂಗಳೂರು: ಆಗಸ್ಟ್ 15 ರೊಳಗೆ ಹೆಬ್ಬಾಳ ಜಂಕ್ಷನ್ ಉದ್ಘಾಟನೆ ಮಾಡಬೇಕು ಎಂಬುದು ನಮ್ಮ ಆಲೋಚನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ವಿಧಾನಸೌಧದಲ್ಲಿ ಮಂಗಳವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಹೆಬ್ಬಾಳ ಮೇಲ್ಸೆತುವೆ ಜಂಕ್ಷನ್, ಶಿವಾನಂದ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಹಾಗೂ ಗಾಂಧಿ ಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಆ.15 ರ ಒಳಗಾಗಿ ಉದ್ಘಾಟನೆ ಮಾಡಬೇಕು ಎಂಬುದು ನಮ್ಮ ಆಲೋಚನೆ. ಕೆ.ಆರ್.ಪುರಂ ಕಡೆಯಿಂದ ಬರುವ ಹೆಬ್ಬಾಳ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂಬುದು ನಮ್ಮ ಆಲೋಚನೆ ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ವಾರ್ಡ್‌ಗಳ ಮರುವಿಂಗಡಣಾ ಆಯೋಗವು ವಾರ್ಡ್‌ಗಳ ಮರುರಚನೆ, ಗಡಿ ಗುರುತಿಸುವಿಕೆ ಕೆಲಸ ಆರಂಭಿಸಲಿದೆ. ಈ ಆಯೋಗವು ತಾತ್ಕಾಲಿಕ ವಾರ್ಡ್‌ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿಗಳ ಸ್ವೀಕಾರ ಮತ್ತಿತರ ಕೆಲಸಗಳ ಅಂತಿಮ ನಿರ್ಣಯಗಳನ್ನು ಒಂದು ತಿಂಗಳ ಕಾಲ ಅಂದರೆ ಸೆ.1 ರವರೆಗೆ ನಿರ್ವಹಿಸಲಿದೆ.‌ ಆನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ತದನಂತರ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಎಲ್ಲಾ ಪ್ರಕ್ರಿಯೆ ಮುಗಿದ ತಕ್ಷಣ ನಾವು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು, ವೇಳಾಪಟ್ಟಿ ನಿಗದಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ ಎಂದರು.

ಅ.22 ರಿಂದ ಬೃಹತ್ ಇ ಖಾತಾ ಜಾಗೃತಿ ಅಭಿಯಾನ
ಬೆಂಗಳೂರಲ್ಲಿ 24 ಲಕ್ಷ ‘ಎ’ ಮತ್ತು ‘ಬಿ’ ಖಾತೆಗಳಿವೆ. ಈಗಾಗಲೇ 6.5 ಲಕ್ಷ‌ ಇ- ಖಾತೆಗಳನ್ನು ಜನರು ತೆಗೆದುಕೊಂಡಿದ್ದಾರೆ.‌ ಜನರಿಗೆ ಆನ್ ಲೈನ್ ನಲ್ಲಿ ಆಸ್ತಿ ವಿವರಗಳು ನಿಖರವಾಗಿ ದೊರೆಯಬೇಕು. ಮುಂದಿನ‌ ದಿನಗಳಲ್ಲಿ ತೊಂದರೆಯಾಗಬಾರದು ಎಂಬುದು ನಮ್ಮ ಆಲೋಚನೆ. ಈ ಕಾರಣಕ್ಕೆ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಬೃಹತ್ ಜಾಗೃತಿ ಅಭಿಯಾನದ ಆಲೋಚನೆ ಮಾಡಲಾಗಿದೆ. ಈ ಅಭಿಯಾನ ಯಶಸ್ವಿಗೊಳಿಸಲು ಶಿಕ್ಷಕರು, ಬೆಸ್ಕಾಂ ಬಿಲ್‌ ಕಲೆಕ್ಟರ್‌ಗಳು, ಪಾಲಿಕೆಯ ನೌಕರರ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಲಾಗುವುದು.‌ ಸಾರ್ವಜನಿಕರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಅಭಿಯಾನದ ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ ಇವರಿಗೆ ಜವಾಬ್ದಾರಿ ನೀಡುವುದಿಲ್ಲ ಎಂದು ತಿಳಿಸಿದರು.

ಆ.15 ರಿಂದ ಬಿ ಖಾತೆಯಿಂದ ಎ ಖಾತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ಯಾರಿಗೆ ಅರ್ಜಿ ಹಾಕಲು ಅರ್ಹತೆಯಿದೆ, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

3,700 ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ
ವಿವಿಧ ಯೋಜನೆಗಳ ಅಡಿ ಫಲಾನುಭವಿಗಳಾಗಿ ಆಯ್ಕೆಯಾದ 10-15 ಸಾವಿರ ಜನರಿಗೆ ಸೌಲಭ್ಯಗಳ ಹಂಚಿಕೆ ಮಾಡಲಾಗುವುದು. 3,700 ಬೀದಿಬದಿ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಸಲ್ಲಿಸಿದ್ದರು.‌ ಅವರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

Share This Article