ಬೀದರ್‌ನಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ – ಇತ್ತ ಬ್ರಿಮ್ಸ್‌ನಲ್ಲಿ ಫ್ರೀ ಇಂಜೆಕ್ಷನ್ ಕೊಡದೇ ದೋಖಾ

Public TV
2 Min Read

ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ (Bidar) ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಮಿತಿಮೀರಿದೆ. ಇದರಿಂದ ಮಕ್ಕಳು, ಜನರು ಮನೆಯಿಂದ ಹೊರಬರಲು ಭಯ ಬೀಳುತ್ತಿದ್ದಾರೆ. ಆದರೆ ಇತ್ತ ಬ್ರಿಮ್ಸ್‌ನಲ್ಲಿ ಉಚಿತ ರೇಬಿಸ್ ಇಂಜೆಕ್ಷನ್ (Rabies Injection) ನೀಡದೇ ವೈದ್ಯರು ಜನರಿಗೆ ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ಕೆಲವು ದಿನಗಳಲ್ಲೇ ಮಕ್ಕಳು ಹಾಗೂ ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮನ್ನಾಎಖೆಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಹತ್ತಾರು ಮಕ್ಕಳಿಗೆ ಬೀದಿ ನಾಯಿಗಳು, ಮುಖ, ಕೈ, ಕಾಲು, ಬೆನ್ನು ಸೇರಿದಂತೆ ಇಡೀ ದೇಹವೇ ರಕ್ತ ಮಯವಾಗುವಂತೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಸದ್ಯ ಮಕ್ಕಳಿಗೆ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನುಳಿದ ಮಕ್ಕಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ ಬೀದರ್ ನಗರದ ಮೈಲೂರಿನ ಐದಾರು ಜನರಿಗೆ ಬೀದಿ ನಾಯಿಗಳು ಗಂಭೀರವಾಗಿ ಕಚ್ಚಿ ಗಾಯಗೊಳಿಸಿವೆ. ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ನಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಲು ನಮಗೆ ಭಯವಾಗುತ್ತಿದೆ. ಅಲ್ಲದೇ ಬ್ರಿಮ್ಸ್‌ಗೆ ಬಂದ್ರೆ ರೇಬಿಸ್ ಇಂಜೆಕ್ಷನ್ ನೀಡ್ತಿಲ್ಲ. ನಾವೇ 2 ಸಾವಿರ ರೂ. ಖರ್ಚು ಮಾಡಿ ಹೊರಗಡೆಯಿಂದ ತಂದು ಕೊಟ್ಟಿದ್ದೇವೆ ಎಂದು ಮಗುವಿನ ತಾಯಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಬ್ರೇಕ್‌ – ನಿಯಮ ಉಲ್ಲಂಘಿಸಿದರೆ ಬೀಳುತ್ತೆ ಭಾರೀ ದಂಡ!

ಇದೊಂದು ಕಡೆಯಾದ್ರೆ, ಮತ್ತೊಂದು ಕಡೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಬೇಕಿದ್ದ ರೇಬಿಸ್ ಇಂಜೆಕ್ಷನ್ ಕೊಡದೇ ಜನ್ರಿಗೆ ವಂಚಿಸುತ್ತಿದ್ದಾರೆ. ಮನ್ನಾಎಖೆಳ್ಳಿ ಗ್ರಾಮದಲ್ಲಿ ಓರ್ವ ಮಗುವಿಗೆ ಹುಚ್ಚು ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ಈ ವೇಳೆ ಬ್ರಿಮ್ಸ್ ವೈದ್ಯಾಧಿಕಾರಿಗಳು ಮಗುವಿಗೆ ತುರ್ತು ರೇಬಿಸ್ ಇಂಜೆಕ್ಷನ್ ಕೊಡಬೇಕಿತ್ತು. ಆದರೆ ನಮ್ಮ ಬಳಿ ಇಲ್ಲಾ ಹೊರಗಡೆಯಿಂದ ತನ್ನಿ ಎಂದು ಬೇರೆ ಕಡೆಯಿಂದ ತರಿಸಿದ್ದಾರೆ.

ಇನ್ನು ಓಲ್ಡ್ ಸಿಟಿ, ಚಿದ್ರಿ, ಮೈಲೂರು, ಗುಂಪಾ ಸೇರಿದಂತೆ ಬೀದರ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ರೂ, ನಗರಸಭೆ ಮಾತ್ರ ಕೈಕಟ್ಟಿ ಕುಳಿತಿದೆ. ಬೀದಿ ನಾಯಿಗಳನ್ನು ಹಿಡಿಯಲು ಪ್ರತಿ ವರ್ಷ 10 ರಿಂದ 20 ಲಕ್ಷ ರೂ. ಖರ್ಚು ಮಾಡ್ತಾರೆ. ಆದ್ರೆ ಈ ಬಾರಿ ಬೀದಿ ನಾಯಿಗಳ ಹಾವಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ನಾಲ್ಕು ನಾಯಿಗಳನ್ನು ಹಿಡಿದಂತೆ ಮಾಡಿ ಆಮೇಲೆ ಡಾಗ್ ಕ್ಯಾಚರ್ಸ್ ನಾಪತ್ತೆಯಾಗುತ್ತಿದ್ದಾರೆ. ನಗರಸಭೆಯ ಅಧಿಕಾರಿಗಳು ಇದನ್ನ ಗಮನಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.

ದೆಹಲಿಯಲ್ಲಿ ಬೀದಿ ನಾಯಿ ಹಾವಳಿಗೆ ಶೀಘ್ರವೇ ಬ್ರೇಕ್ ಹಾಕಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಅದೇ ರೀತಿ ಚಾಟಿ ಬೀಸಿದ್ರೆ ಮಾತ್ರ ಬೀದರ್‌ನಲ್ಲೂ ಅಧಿಕಾರಿಗಳು ಎಚ್ಚರಗೊಳ್ತಾರೆ. ಈ ಮೂಲಕ ಬ್ರಿಮ್ಸ್‌ನಲ್ಲಿ ರೇಬಿಸ್ ಚುಚ್ಚುಮದ್ದು ಕಳ್ಳಾಟಕ್ಕೆ ಬ್ರೇಕ್ ಹಾಕುವ ಜೊತೆಗೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.ಇದನ್ನೂ ಓದಿ: ವಿದೇಶಗಳಲ್ಲೂ ಪೊಲೀಸ್ ಸ್ಟೇಷನ್‌ – 53 ದೇಶಗಳಲ್ಲಿ ಚೀನಾದ ಕುತಂತ್ರ!

Share This Article