ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!

Public TV
2 Min Read

– ಮುಧೋಳ  ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಗೆ ಬರುತ್ತಿಲ್ಲ ಜನ
– ನಗರದಿಂದ 3 ಕಿ.ಮೀ ದೂರದಲ್ಲಿದೆ ಆಫೀಸ್‌

ಬಾಗಲಕೋಟೆ: ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಎನ್ನುವ ಕನಸು, ಆಸೆ ಎಲ್ಲ ಹಿಂದುಳಿದ ವರ್ಗದವರಿಗೂ ಇರುತ್ತದೆ. ಆದರೆ ಮೂರು ಮೈಲಿ ದೂರದಲ್ಲಿರುವ ಕಚೇರಿ ತಲುಪುವುದೇ ಹರಸಾಹಸ. ಕಚೇರಿ ಮೆಟ್ಟಿಲು ಹತ್ತುವುದೊರಳಗೆ ಸಾಕಪ್ಪ ಸಾಕು ಎನಿಸಿ ಬಿಡುತ್ತದೆ.

ಹೌದು, ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ, ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಅದರಲ್ಲೂ ಹಿಂದುಳಿದವರಿಗಾಗಿ ಮೀಸಲಿರುವ ಹಿಂದುಳಿದ ವರ್ಗಗಳ ತಾಲೂಕ ಕಚೇರಿಯ ಕಥೆ-ವ್ಯಥೆ ಇದು. ಮುಧೋಳ (Mudhol) ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCM Office) ಕಛೇರಿಯ ಸ್ಥಿತಿ ಇದು. ನಗರದ ಪ್ರಮುಖ ಜನ ವಸತಿ ಪ್ರದೇಶ, ಪ್ರಮುಖ ಬೀದಿಗಳಲ್ಲಿ ಇರಬೇಕಿದ್ದ ಇಲಾಖೆ ಕಚೇರಿ, ನಗರದಿಂದ ಬರೋಬ್ಬರಿ 3 ಕಿ.ಮೀ ದೂರದಲ್ಲಿದೆ. ಇದು ಸಾರ್ವಜನಿಕರಿಗೆ ವರದಾನ ಆಗುವ ಬದಲು ನತದೃಷ್ಟ ಇಲಾಖೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ.

ಅತೀ ಹೆಚ್ಚಿನ ಪ್ರಮಾಣದಲ್ಲಿ ಯೋಜನೆಗಳು ಇರುವುದೇ ಹಿಂದುಳಿದ ವರ್ಗಗಗಳ ಇಲಾಖೆಯಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣ, ವಸತಿ, ರೈತರಿಗೆ ಗಂಗಾ ಕಲ್ಯಾಣ ಸೇರಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಮುಧೋಳ ತಾಲೂಕಿನಲ್ಲಿ ಹತ್ತಾರು ಸರ್ಕಾರಿ ವಸತಿ ನಿಲಯಗಳು ಈ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಸ್ವಂತ ಜಾಗ, ಕಟ್ಟಡ ಹೊಂದಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎನ್ನುವುದೇ ದುರಂತದ ಸಂಗತಿ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

ಬೀಳಗಿ, ಗಲಗಲಿ ರಸ್ತೆ ಪಕ್ಕದ ಸೈಯದಸಾಬ ದರ್ಗಾ ಹಿಂಭಾಗದಲ್ಲಿರುವ ದೇವರಾಜ ಅರಸು ಭವನ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅದು ಕೂಡ ಕಳಪೆ ಕಟ್ಟಡ ಎನ್ನುವುದು ಕಚೇರಿ ಒಳಗೆ ಕಾಲಿಟ್ಟರೆ ಸಾಕು ಗೋಡೆಗಳೇ ಸಾರಿ ಸಾರಿ ಹೇಳುತ್ತವೆ. ಈ ಕಚೇರಿ ತಲುಪಬೇಕಾದರೆ ಸ್ವಂತ ವಾಹನ ಖಂಡಿತ ಬೇಕು. ಇಲ್ಲವಾದಲ್ಲಿ ಕಾಲ್ನಡಿಗೆಯಲ್ಲಿ ಕನಿಷ್ಠ ಮೂರು ಕಿಲೋ ಮೀಟರ್ ನಡೆದೇ ಸಾಗಬೇಕು. ಕಚೇರಿ ತಲುಪಬೇಕಾದ್ರೆ ಸರ್ಕಾರಿ ಬಸ್, ವಾಹನದ ಸೌಲಭ್ಯ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ಈ ಕಚೇರಿಯನ್ನೇ ಅವಲಂಬಿಸಿದ್ದಾರೆ.

ಕಚೇರಿ ಸ್ಥಳ ಪತ್ತೆ ಮಾಡಲು ಪರದಾಡುವುದನ್ನು ನೋಡಿದರ ಅಯ್ಯೋ ಭಗವಂತ ಯಾಕ ಬೇಕು ಹರಸಾಹಸ ಅಂತ ಅನಿಸಿ ಬಿಡುತ್ತದೆ. ನಿರ್ಜನ ಪ್ರದೇಶವಾಗಿರುವುದರಿಂದ ಆಟೋ ಸಂಚಾರ ದುರ್ಲಭ. ಜನಸಂದಣಿ ಇಲ್ಲದಿರುವುದು ಮತ್ತು ಪಕ್ಕದಲ್ಲಿ ಸ್ಮಶಾನ, ಕಲ್ಲಿನ ಕಣಿವೆಗಳು ಇರುವುದರಿಂದ ಒಂಟಿಯಾಗಿ ಮಹಿಳೆಯರು, ವಯೋವೃದ್ಧರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಚೇರಿಗೆ ಹೋಗಲು ಭಯ ಪಡುತ್ತಿದ್ದಾರೆ. ಕಚೇರಿ ಒಳಪ್ರವೇಶ ಮಾಡಲು ಅಂಗವಿಕಲರಿಗೆ ಬಹಳಷ್ಟು ತೊಂದರೆ ಎದುರಾಗುತ್ತದೆ. ಅವರ ಗೋಳಾಟ ದೇವರೇ ಬಲ್ಲ. ಕಚೇರಿಗೆ ದೂರವಾಣಿ ಸಂಪರ್ಕವೂ ಇಲ್ಲ. ಕಚೇರಿಯಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ನಿಷ್ಕಾಳಜಿ, ಅಸಮರ್ಪಕ ಕಾರ್ಯನಿರ್ವಹಣೆ ಬೇಸರ ಉಂಟು ಮಾಡುತ್ತದೆ. ಆಡಳಿತ ವ್ಯವಸ್ಥೆ ಜನರಿಗೆ ಹತ್ತಿರವಿರಲಿ ಅಂತ ಸರ್ಕಾರ ಬಯಸುತ್ತಿದೆ. ಆದರೆ ಮುಧೋಳ ಹಿಂದುಳಿದ ವರ್ಗಗಳ ಇಲಾಖೆ ಜನರ ಸೇವೆಯಿಂದ ಬಹು ದೂರವಾಗುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಚೇರಿ ನಗರದಿಂದ ಮೂರು ಕಿ.ಮೀ. ದೂರದಲ್ಲಿದೆ. ಪಕ್ಕದಲ್ಲಿ ಸ್ಮಶಾನ, ಕಲ್ಲಿನ ಕ್ವಾರಿ ಇದೆ. ಜನರ ಓಡಾಟ ಇಲ್ಲವೇ ಇಲ್ಲ. ಸೌಲಭ್ಯ ಪಡೆಯಲು ಹರಸಾಹಸ ಪಡಬೇಕು. ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವೆ ಬಂದ್ ಮಾಡುವುದು ಒಳಿತು ಎಂದು ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.

Share This Article