ವಿದೇಶಗಳಲ್ಲೂ ಪೊಲೀಸ್ ಸ್ಟೇಷನ್‌ – 53 ದೇಶಗಳಲ್ಲಿ ಚೀನಾದ ಕುತಂತ್ರ!

Public TV
4 Min Read

ತನ್ನ ಭದ್ರತೆಗೆ ವಿಶೇಷ ಆದ್ಯತೆ ಕೊಡುವ ಚೀನಾ, ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ರಹಸ್ಯವಾಗಿ ಪೊಲೀಸ್‌ ಠಾಣೆಗಳನ್ನು ತೆರೆದಿದೆ ಎಂದು ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿದೆ. ಚೀನಾ ತನ್ನ ನಾಗರಿಕರು ವಿದೇಶದಲ್ಲಿದ್ದುಕೊಂಡು ಕಮ್ಯುನಿಸ್ಟ್ ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದರೆ ಅಂತವರನ್ನು ಹತ್ತಿಕ್ಕಲು ಈ ರೀತಿ ವ್ಯವಸ್ಥೆ ಮಾಡಿಕೊಂಡಿದೆ ಎಂಬ ಆರೋಪವಿದೆ. ಈಗಾಗಲೇ 53ಕ್ಕೂ ಹೆಚ್ಚು ದೇಶಗಳಲ್ಲಿ 102 ಪೊಲೀಸ್‌ ಠಾಣೆಗಳನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ. ಈ ವಿಚಾರ ಮತ್ತೆ ಮತ್ತೆ ಚರ್ಚೆಯಾಗುತ್ತಿದ್ದು, ಮುಂದುವರೆದ ದೇಶಗಳನ್ನು ಚಿಂತೆಗೀಡುಮಾಡಿದೆ.

ನ್ಯೂಯಾರ್ಕ್‌ನಲ್ಲಿ ಸಿಕ್ಕಿಬಿದ್ದ ʻಕಳ್ಳʼ ಪೊಲೀಸರು!
2022 -2023 ರಲ್ಲಿ ನ್ಯೂಯಾರ್ಕ್‌ನಲ್ಲಿ ಅನಧಿಕೃತವಾಗಿ ಪೊಲೀಸ್‌ ಠಾಣೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಈ ಪೊಲೀಸ್‌ ಠಾಣೆ ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯದ ಶಾಖೆಯಾದ ಫುಝೌ ಮುನ್ಸಿಪಲ್ ಪಬ್ಲಿಕ್ ಸೆಕ್ಯುರಿಟಿ ಬ್ಯೂರೋದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಬಂದಿತ್ತು. ಈ ಪೊಲೀಸ್‌ ಠಾಣೆಗೆ ನ್ಯಾಯಾಲಯ ಮತ್ತು ರಾಜತಾಂತ್ರಿಕ ಅನುಮತಿ ಇರಲಿಲ್ಲ. ಈ ಪ್ರಕರಣ ಗುಪ್ತಚರ ಅಧಿಕಾರಿಗಳನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಪ್ರಕರಣ ಹೊರಗೆ ಬರುತ್ತಿದ್ದಂತೆ ಯುಕೆ, ಜರ್ಮನಿ, ನೆದರ್‌ಲ್ಯಾಂಡ್ಸ್ ಮತ್ತು ಕೆನಡಾದ ಪೊಲೀಸರು ತಮ್ಮ ದೇಶಗಳಲ್ಲಿ ಇದೇ ರೀತಿಯ ಆರೋಪಗಳ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದರು.

ಸೇಫ್‌ಗಾರ್ಡ್‌ ವರದಿ
ಸೇಫ್‌ಗಾರ್ಡ್ ಡಿಫೆಂಡರ್ಸ್ ಎಂಬ ಮಾನವ ಹಕ್ಕುಗಳ ಹೋರಾಟಗಾರರ ತಂಡ ಪ್ರಕಟಿಸಿದ ವರದಿಯಲ್ಲಿ, ಇಟಲಿ, ಫ್ರಾನ್ಸ್, ಕೆನಡಾ, ಬ್ರಿಟನ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ 53 ದೇಶಗಳಲ್ಲಿ 102 ಚೀನಾ ಪೊಲೀಸ್ ಠಾಣೆಗಳಿವೆ ಎಂದು ಉಲ್ಲೇಖಿಸಿತ್ತು. ಮೊದಲಿಗೆ ವಿದೇಶಗಳಲ್ಲಿ ನೆಲೆಸಿರುವ ಚೀನೀ ಪ್ರಜೆಗಳು ನಡೆಸುವ ವಂಚನೆ ಮತ್ತು ಟೆಲಿಕಮ್ಯುನಿಕೇಶನ್ ವಂಚನೆಗಳನ್ನು ತಡೆಯುವ ಹೆಸರಿನಲ್ಲಿ ಈ ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿತ್ತು. ಈಗ ಈ ಕಚೇರಿಗಳು ಅಂತಾರಾಷ್ಟ್ರೀಯ ಕಾನೂನುಗಳನ್ನೇ ಉಲ್ಲಂಘಿಸುತ್ತಿವೆ.

ಏಪ್ರಿಲ್ 2021ರಿಂದ ಜುಲೈ 2022ರ ತನಕ 2,30,000 ಜನ ವಿದೇಶಗಳಲ್ಲಿ ನೆಲೆಸಿರುವ ಚೀನೀಯರನ್ನು ಚೀನಾಗೆ ಮರಳಿ, ಕ್ರಿಮಿನಲ್ ವಿಚಾರಣೆ ಎದುರಿಸುವಂತೆ ಮಾಡಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದೊಳಗೆ ಈಗಾಗಲೇ ಜನರನ್ನು ನಿಯಂತ್ರಿಸಲಾಗುತ್ತಿದೆ. ಆದರೆ ಚೀನಾದಿಂದ ಹೊರಗಿರುವ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ. ಆದ್ದರಿಂದ ಈಗ ಚೀನಾ ಸ್ವತಂತ್ರ ದೇಶಗಳಲ್ಲಿ ವಾಸಿಸುತ್ತಿರುವ ಚೀನೀಯರನ್ನು ನಿಯಂತ್ರಿಸಲು ಬಯಸುತ್ತಿದೆ ಎಂದು ವಿದೇಶದಲ್ಲಿರುವ ಚೀನಾದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಚೀನಾದ ಇಂತಹ ಚಟುವಟಿಕೆಗಳು ಯುರೋಪ್, ಕೆನಡಾ ಮತ್ತು ಅಮೆರಿಕಾದ ಸುರಕ್ಷತಾ ಸಂಸ್ಥೆಗಳು ಮತ್ತು ಸರ್ಕಾರಗಳು ಗಾಬರಿಯಾಗುವಂತೆ ಮಾಡಿವೆ.

ಚೀನಾ ಸರ್ಕಾರದೊಂದಿಗೆ ಸಂಪರ್ಕವಿದೆಯೇ?
ವಿದೇಶಗಳಲ್ಲಿರುವ ಪೊಲೀಸ್ ಠಾಣೆಗಳು ಚೀನಾದ ಪ್ರಾದೇಶಿಕ ಸಾರ್ವಜನಿಕ ಭದ್ರತಾ ಬ್ಯೂರೋಗಳಿಂದ ನಿರ್ವಹಿಸಲ್ಪಡುತ್ತಿವೆ. ಕಮ್ಯುನಿಸ್ಟ್‌ ಪಕ್ಷ ತನ್ನ ಸರ್ವಾಧಿಕಾರಿ ದಬ್ಬಾಳಿಕೆಯ ವ್ಯಾಪ್ತಿಯನ್ನು ವಿಶ್ವದಾದ್ಯಂತ ವಿಸ್ತರಿಸಲು ಈ ಕ್ರಮಕೈಗೊಂಡಿದೆ ಎನ್ನಲಾಗುತ್ತಿದೆ. ಇಷ್ಟಾದರೂ ಚೀನಾ ಮಾತ್ರ ಆರೋಪಗಳನ್ನು ತಳ್ಳಿಹಾಕುತ್ತಲೇ ಬಂದಿದೆ.

ಚೀನಾ ಸರ್ಕಾರ ಹೇಳೋದೇನು?
ಇಂತಹ ವರದಿಗಳ ಬೆನ್ನಲ್ಲೇ ನೆದರ್‌ಲ್ಯಾಂಡ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ʻಚೀನಾದ ನ್ಯಾಯಾಂಗ ಮತ್ತು ಕಾನೂನು ಜಾರಿ ಅಧಿಕಾರಿಗಳು ಅಂತರರಾಷ್ಟ್ರೀಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇತರ ದೇಶಗಳ ನ್ಯಾಯಾಂಗ ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಗೌರವಿಸುತ್ತಾರೆ.ʼ ಎಂದು ಆರೋಪವನ್ನು ತಳ್ಳಿಹಾಕಿತ್ತು.

ಈ ಬಗ್ಗೆ ಚೀನಾ ಸರ್ಕಾರ ಸಹ ಪ್ರತಿಕ್ರಿಯಿಸಿ, ವಿದೇಶದಲ್ಲಿರುವ ಕೇಂದ್ರಗಳು ಚೀನೀ ಪ್ರಜೆಗಳಿಗೆ ಚಾಲನಾ ಪರವಾನಗಿ ಮತ್ತು ಇತರ ದಾಖಲೆಗಳನ್ನು ನವೀಕರಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ COVID-19 ಸಮಯದಲ್ಲಿ ಈ ಕೇಂದ್ರಗಳು ಸಹಾಯ ಮಾಡಿವೆ. ಇದರ ಜೊತೆ ಅಂತಾರಾಷ್ಟ್ರೀಯ ಅಪರಾಧಗಳನ್ನು ತಡೆಯಲು ಈ ಕೇಂದ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿತ್ತು.

ಚೀನಾ ಅಕ್ರಮ ಪೊಲೀಸ್‌ ಠಾಣೆ ವಿರುದ್ಧ ತನಿಖೆ
ಇದಕ್ಕೆ ಪ್ರತಿಕ್ರಿಯೆಯಾಗಿ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್, ಯುನೈಟೆಡ್ ಕಿಂಗ್‌ಡಮ್, ಸ್ಪೇನ್, ಪೋರ್ಚುಗಲ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ ಕೆಲವು ದೇಶಗಳು ಚೀನಾದ ಗುಪ್ತ ಪೊಲೀಸ್‌ ಠಾಣೆಗಳ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದವು.

ಆಸ್ಟ್ರೇಲಿಯಾ: ನವೆಂಬರ್ 2022 ರಲ್ಲಿ, ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ತನಿಖೆ ನಡೆಸಿ, ಚೀನಾದ ಪೊಲೀಸರು ಸಿಡ್ನಿಯಲ್ಲಿ ಪೊಲೀಸ್ ಠಾಣೆಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆನಡಾ: ಚೀನಾ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಕೆನಡಾ, ಚೀನಾದ ರಾಯಭಾರಿಯನ್ನು ಕರೆಸಿ ಅಕ್ರಮ ಪೊಲೀಸ್‌ ಠಾಣೆಗಳ ವಿಚಾರವಾಗಿ ಎಚ್ಚರಿಕೆ ನೀಡಿತು. ಅಂತಹ ಚಟವಟಿಕೆ ನಿಲ್ಲಿಸುವಂತೆ ಸೂಚಿಸಿತು. ಮಾರ್ಚ್ 2023 ರಲ್ಲಿ, ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು, ಕ್ವಿಬೆಕ್‌ನಲ್ಲಿರುವ ಎರಡು ಆಪಾದಿತ ಪೊಲೀಸ್ ಠಾಣೆಗಳ ವಿರುದ್ಧ ತನಿಖೆ ನಡೆಸಿದ್ದರು.

ಜಪಾನ್: ಫೆಬ್ರವರಿ 2024 ರಲ್ಲಿ, ಟೋಕಿಯೊ ಪೊಲೀಸರು ಶಂಕಿತ ವಿದೇಶಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಬಳಿಕ ಓಕಿನಾವಾದಲ್ಲಿ ವಿದೇಶಿ ಪೊಲೀಸ್ ಠಾಣೆ ಸ್ಥಾಪಿಸುವ ಪ್ರಯತ್ನ ನಡೆದಿಲ್ಲ ಎಂದು ಜಪಾನಿನ ಮಾಧ್ಯಮ ವರದಿ ಮಾಡಿತ್ತು.

ದಕ್ಷಿಣ ಕೊರಿಯಾ: 2023 ರಲ್ಲಿ, ದಕ್ಷಿಣ ಕೊರಿಯಾದ ಅಧಿಕಾರಿಗಳು ದೇಶದಲ್ಲಿನ ಚೀನೀ ಪೊಲೀಸ್ ವಿದೇಶಿ ಸೇವಾ ಕೇಂದ್ರಗಳನ್ನು ತನಿಖೆ ನಡೆಸಿದ್ದರು. ಬಳಿಕ ಹಾನ್ ನದಿಯ ರೆಸ್ಟೋರೆಂಟ್‌ನಲ್ಲಿರುವ ಚೀನೀ ಪೊಲೀಸ್ ಠಾಣೆಯನ್ನು ಮುಚ್ಚಿದ್ದರು. ಬಳಿಕ ದೇಶದ ಗೂಢಚರ್ಯೆ ಕಾನೂನುಗಳಲ್ಲಿನ ಲೋಪದೋಷಗಳನ್ನು ಮುಚ್ಚಲು ಹೊಸ ಶಾಸನವನ್ನು ರೂಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಯುನೈಟೆಡ್ ಕಿಂಗ್‌ಡಮ್: ಲಂಡನ್‌ನಲ್ಲಿರುವ 49 ವ್ಯಾಟ್‌ಫೋರ್ಡ್ ವೇ, ವಿದೇಶಿ ಪೊಲೀಸ್ ಠಾಣೆಗಳಲ್ಲಿ ಒಂದಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆಯನ್ನು ಸಹ ನಡೆಸಿದ್ದರು. ಬಳಿಕ ಜೂನ್ 2023 ರಲ್ಲಿ, ಬ್ರಿಟಿಷ್ ಭದ್ರತಾ ಸಚಿವ ಟಾಮ್ ತುಗೆಂಧಾಟ್ ಅವರು ಚೀನಾ ಬ್ರಿಟನ್‌ನಲ್ಲಿರುವ ತನ್ನ ಪೊಲೀಸ್ ಸೇವಾ ಕೇಂದ್ರಗಳನ್ನು ಮುಚ್ಚಲಾಗಿದೆ. ತನಿಖೆಯಲ್ಲಿ ಠಾಣೆಗಳಿಗೆ ಸಂಬಂಧಿಸಿದ ಯಾವುದೇ ಕಾನೂನುಬಾಹಿರ ಚಟುವಟಿಕೆ ಕಂಡುಬಂದಿಲ್ಲ ಎಂದು ಹೇಳಿದ್ದರು.

ಚೀನಾ ಸಂಬಂಧಿತ ಪೊಲೀಸ್‌ ಠಾಣೆಗಳು ಭಾರತದಲ್ಲಿ ಗುಪ್ತವಾಗಿ ಕಾರ್ಯ ನಿರ್ವಹಿಸಿವೆಯೇ? ಅಥವಾ ನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಇನ್ನೂ ಯಾವುದೇ ವರದಿಯಾಗಲಿ ಅಥವಾ ಚರ್ಚೆಗಳು ಇದುವರೆಗೂ ನಡೆದಿಲ್ಲ.

Share This Article