– ಧರ್ಮಸ್ಥಳದ 13ನೇ ಪಾಯಿಂಟ್‌ನಲ್ಲಿ ಅಸ್ಥಿಗೆ ಶೋಧ
ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಪಾಯಿಂಟ್ 13 ಕುತೂಹಲಕ್ಕೆ ತೆರೆಬಿದ್ದಿದೆ. 6 ತಾಸು ಹುಡುಕಿದರೂ ಏನೂ ಸಿಕ್ಕಿಲ್ಲ.
ಸೋಮವಾರ ನೇತ್ರಾವತಿ ತಟದ ಪಾಯಿಂಟ್ 13ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಮೂಲಕ ಡೆಮೋ ನಡೆಸಿ ತೆರಳಿದ್ದ ವಿಶೇಷ ತನಿಖಾ ತಂಡ(SIT) ಇಂದು ನೇರವಾಗಿ ಅಖಾಡಕ್ಕೆ ಇಳಿಯಿತು. ಕಗ್ಗಂಟಾಗಿದ್ದ ಪಾಯಿಂಟ್ ನಂಬರ್ 13ರಲ್ಲಿ ಅನಾಮಿಕನ ಸಮ್ಮುಖದಲ್ಲಿ ಅಸ್ಥಿ ಶೋಧ ನಡೆಸಿದರು.
ಪಾಯಿಂಟ್ 13ರಲ್ಲಿ ಮೂರು ಪಟ್ಟು ಜಾಗವನ್ನು ಗುರುತು ಮಾಡಲಾಗಿತ್ತು. ಕೆಎಸ್‌ಆರ್‌ಪಿ (KSRP) ಸಹಿತ ಶಸ್ತ್ರಸಜ್ಜಿತ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಖುದ್ದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಆಗಮಿಸಿ ಮಾಹಿತಿ ಪಡೆದರು. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ
ಮಧ್ಯಾಹ್ನದ ಹೊತ್ತಿಗೆ ಡ್ರೋನ್ ಮೌಂಟೆಡ್ ಜಿಪಿಆರ್‌ನಿಂದ ಸಂಗ್ರಹಿಸಿದ ಫುಟೇಜ್ ಆಧರಿಸಿ 2 ಹಿಟಾಚಿಗಳ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ಹಿಂದೆ ನೆರೆಯಿಂದ ಮಣ್ಣು ಸ್ವಲ್ಪ ಕೊಚ್ಚಿ ಹೋಗಿತ್ತು. ಜೊತೆಗೆ ರಸ್ತೆ ನಿರ್ಮಾಣ ಸಂಬಂಧ ಪಂಚಾಯತ್ 100 ಲೋಡ್ ಮಣ್ಣನ್ನು ಹಾಕಿತ್ತು. ಹೀಗಾಗಿ ಈ ಮಣ್ಣುಗಳನ್ನು ತೆಗೆದು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅನಾಮಿಕ ದೂರುದಾರ 20 ಅಡಿ ಆಳದವರೆಗೆ ಗುಂಡಿ ತೋಡಲು ಕೋರಿದ್ದಾನೆ. ಮಳೆಯಿಂದಾಗಿ ಮಣ್ಣು ತೆಗೆಯುವಾಗ ನೀರು ಬರುತ್ತಿದೆ. ಹೀಗಾಗಿ ಪೈಪ್‌ಗಳ ಮೂಲಕ ಹೊರ ಹಾಕಲಾಯಿತು. ಹಿಟಾಚಿ ಮೂಲಕ 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳಕ್ಕೆ ಗುಂಡಿ ಅಗೆದು, ಒಂದೇ ಕಡೆ ಸುಮಾರು 6 ತಾಸು ಶೋಧ ನಡೆಸಿ ಇಂದಿನ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು. ಆದರೆ ಯಾವುದೇ ಅಸ್ಥಿಯ ಕುರುಹು ಸಿಗಲಿಲ್ಲ.
ಬುಧವಾರವೂ ಮಣ್ಣು ತೆಗೆಯುವ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ. ಇಂದಿನ ಕಾರ್ಯಾಚರಣೆ ಸಮಯದಲ್ಲಿ ಎರಡು ವಿದ್ಯುತ್ ಕಂಬಗಳಿದ್ದವು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಭೇಟಿ ನೀಡಿ ಕಳೇಬರ ಶೋಧ ಕಾರ್ಯಕ್ಕೆ ಸಾಕ್ಷಿಯಾಯ್ತು. ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಸಭೆ ನಡೆಸಿ ತನಿಖೆಯ ಮಾಹಿತಿಯನ್ನು ಪಡೆದುಕೊಂಡರು. ತನಿಖಾ ತಂಡದ ಎಸ್ಪಿ ಸೈಮನ್ ವಿವರಣೆ ನೀಡಿದರು.