ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಬ್ರೇಕ್‌ – ನಿಯಮ ಉಲ್ಲಂಘಿಸಿದರೆ ಬೀಳುತ್ತೆ ಭಾರೀ ದಂಡ!

Public TV
4 Min Read

-ಶುಲ್ಕ ಏರಿಕೆ ತಡೆಗೆ ದೆಹಲಿ ಶಾಲಾ ಶಿಕ್ಷಣ ಮಸೂದೆ 

ದೆಹಲಿಯಲ್ಲಿ ಖಾಸಗಿ ಶಾಲೆಗಳ (Private Schools) ಶುಲ್ಕ ನಿಯಂತ್ರಣಕ್ಕೆ (School Fees Hike) ದೆಹಲಿ ಸರ್ಕಾರ ನಿರ್ಧರಿಸಿದೆ. ದೆಹಲಿಯಲ್ಲಿ ಖಾಸಗಿ ಶಾಲೆ ಸೇರಿದಂತೆ ಯಾವುದೇ ಶಾಲೆಗಳು ಶುಲ್ಕ ಏರಿಕೆಗೆ  ಇನ್ನೂ ಮುಂದೆ ದೆಹಲಿ ಸರ್ಕಾರದ ಅನುಮತಿ  ಪಡೆಯುವುದು ಕಡ್ಡಾಯವಾಗಿದೆ. ʼದೆಹಲಿ ಶಾಲಾ ಶಿಕ್ಷಣ ಮಸೂದೆ 2025ʼ (Delhi School Education Bill 2025) ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿದೆ. ನಾಲ್ಕು ಗಂಟೆಗಳ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಹಾಗಿದ್ರೆ ಏನಿದು ದೆಹಲಿ ಶಾಲಾ ಶಿಕ್ಷಣ ಮಸೂದೆ? ನಿಯಮಗಳೇನು? ದಂಡ ಎಷ್ಟು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

ಏನಿದು ಶಾಲಾ ಶಿಕ್ಷಣ ಮಸೂದೆ?
ಶಾಲಾ ಶಿಕ್ಷಣ ಮಸೂದೆ (ಶುಲ್ಕ ನಿಗದಿ ಮತ್ತು ರೆಗ್ಯುಲೇಷನ್ ನಲ್ಲಿ ಪಾರದರ್ಶಕತೆ) 2025 ಅನ್ನು ದೆಹಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಮಸೂದೆಯನ್ನು ಈಗ ಲೆಫ್ಟಿನೆಂಟ್ ಗರ್ವನರ್ ಅವರ ಒಪ್ಪಿಗೆಗಾಗಿ ಕಳುಹಿಸಲಾಗಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಮನಸ್ಸಿಗೆ ಬಂದಂತೆ ನಿಗದಿಪಡಿಸುವುದು ಮತ್ತು  ಹೆಚ್ಚಳ  ಮಾಡುವುದಕ್ಕೆ  ಬ್ರೇಕ್‌ ಹಾಕಲು ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ದೆಹಲಿ ವಿಧಾನಸಭೆ ಸ್ಪೀಕರ್ ವಿಜೇಂದ್ರ ಗುಪ್ತಾ ತಿಳಿಸಿದ್ದಾರೆ. 

ದೆಹಲಿಯಲ್ಲಿ ಈ ವರ್ಷ ಕೆಲ ಶಾಲೆಗಳು 30% ರಿಂದ 40%ರಷ್ಟು ಫೀಸ್ ಹೆಚ್ಚಳ ಮಾಡಿವೆ. ಇದರಿಂದ ಪೋಷಕರಿಗೆ ತುಂಬಾ ಹೊರೆಯಾಗಿತ್ತು. ಇದು ಆಕ್ರೋಶಕ್ಕೂ ಕಾರಣವಾಗಿತ್ತು. ಹಲವಾರು ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ದೆಹಲಿಯಲ್ಲಿ ಪೋಷಕರಿಂದ ವ್ಯಾಪಕ ಪ್ರತಿಭಟನೆಗಳು ನಡೆದ ಮೂರು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆಗೆ ದೆಹಲಿ ಲೆಫ್ಟಿನೆಂಟ್ ಗರ್ವನರ್ ಒಪ್ಪಿಗೆ ನೀಡಿದ ಬಳಿಕ ಇದು ಕಾಯಿದೆಯಾಗಿ ಜಾರಿಗೆ ಬರಲಿದೆ. 

ಈ ಹಿಂದೆ ಸರ್ಕಾರದಿಂದ ಹಂಚಿಕೆಯಾದ ಭೂಮಿಯಲ್ಲಿ ನಿರ್ಮಾಣಗೊಂಡ ಸುಮಾರು 350 ಶಾಲೆಗಳು ಮಾತ್ರ ಶುಲ್ಕ ಪರಿಷ್ಕರಣೆಗೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಆದರೇ ಈಗ ದೆಹಲಿ ನಗರದ ಎಲ್ಲಾ 1,443 ಖಾಸಗಿ ಅನುದಾನರಹಿತ ಶಾಲೆಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ. ದೆಹಲಿಯಲ್ಲಿ ಶಾಲೆಗಳು ಏಕಪಕ್ಷೀಯವಾಗಿ ಶಾಲಾ ಶುಲ್ಕ ಏರಿಕೆಗೆ ಈಗ ಬ್ರೇಕ್ ಬಿದ್ದಿದೆ.

ಈ ಮಸೂದೆಯು ಶಾಲೆಗಳು ಏಕಪಕ್ಷೀಯವಾಗಿ ಶುಲ್ಕ ಏರಿಸುವ ಕಳವಳವನ್ನು ನಿವಾರಿಸುವ ಭರವಸೆ ಮೂಢಿಸಿದೆ. ಸರ್ಕಾರದ ಒಪ್ಪಿಗೆ ಇಲ್ಲದೇ ಇನ್ನೂ ಮುಂದೆ ದೆಹಲಿಯಲ್ಲಿ ಯಾವುದೇ ಶಾಲೆಗಳು ಶುಲ್ಕವನ್ನು ಏರಿಕೆ ಮಾಡುವಂತಿಲ್ಲ ಎಂದು ದೆಹಲಿ ಶಿಕ್ಷಣ ಸಚಿವ ಅಶೀಶ್ ಸೂದ್  ಮಸೂದೆ ಮಂಡಿಸುವಾಗ ಹೇಳಿದ್ದಾರೆ.

ದೆಹಲಿ ಶಾಲಾ ಶಿಕ್ಷಣ ಕಾಯಿದೆ ಮತ್ತು ನಿಯಮಗಳು, 1973ರ ನಿಯಮಗಳನ್ನು ಹೊಸ ಕಾಯಿದೆಯಲ್ಲಿ ಬದಲಾಯಿಸಲಾಗಿದೆ. ಈ ಹಿಂದಿನ ಕಾಯಿದೆಯಲ್ಲಿ ಬಹುತೇಕ ಶಾಲೆಗಳು ಶಾಲಾ ಶುಲ್ಕ ಏರಿಕೆಗೆ ದೆಹಲಿ ಸರ್ಕಾರದ ಒಪ್ಪಿಗೆ ಪಡೆಯಬೇಕಾಗಿರಲಿಲ್ಲ. ಕೊರೊನಾ ಸಮಯದಲ್ಲಿ ಬಹಳಷ್ಟು ಶಾಲೆಗಳು, ಸರ್ಕಾರದ ಆದೇಶವನ್ನು ಉಲಂಘಿಸಿ ಶುಲ್ಕ ಏರಿಕೆ ಮಾಡಿದ್ದವು. ಸ್ಪಷ್ಟ, ಕಾನೂನು ಬದ್ದ ವ್ಯವಸ್ಥೆಯೇ ಇರಲಿಲ್ಲ. ಸರ್ಕಾರದ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವೂ ಇರಲಿಲ್ಲ. ಈಗ ಈ ಸಮಸ್ಯೆಗಳೆಲ್ಲಾ ಈ ಹೊಸ ಕಾಯಿದೆಯಿಂದ ಪರಿಹಾರವಾಗಲಿದೆ.

ದೆಹಲಿಯಲ್ಲಿ ಶಾಲೆಗಳು ಶುಲ್ಕ ನಿರ್ಧರಿಸುವ ಸಮಿತಿಯಲ್ಲಿ ಕೇವಲ ಶಾಲಾ ಮ್ಯಾನೇಜ್ಮೆಂಟ್ ಮಾತ್ರವಲ್ಲ, ಪೋಷಕರಿಗೂ ಸ್ಥಾನ ನೀಡಲಾಗಿದೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪ್ರತಿಕೂಲ ಕ್ರಮ ಕೈಗೊಳ್ಳುವಂತಿಲ್ಲ. ಸಮರ್ಥನೀಯವಲ್ಲದ ರೀತಿ ಶಾಲಾ ಶುಲ್ಕ ಏರಿಕೆ ಮಾಡಿದರೇ, ಅಂಥ ಶಾಲೆಗಳಿಗೆ ಭಾರಿ ದಂಡ ವಿಧಿಸಲಾಗುತ್ತೆ.  ಮೂರು ಹಂತದ ಸಮಸ್ಯೆ ಪರಿಹಾರದ ವ್ಯವಸ್ಥೆಯನ್ನು ಹೊಸ ಕಾಯಿದೆಯಲ್ಲಿ ರೂಪಿಸಲಾಗಿದೆ. 

ಪ್ರತಿ ಖಾಸಗಿ ಶಾಲೆಯು ಪ್ರತಿ ವರ್ಷ ಜುಲೈ 15 ರೊಳಗೆ ಶಾಲಾ ಮಟ್ಟದ ಶುಲ್ಕ ನಿಯಂತ್ರಣ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಶಾಲಾ ಆಡಳಿತ ಮಂಡಳಿಯ ನಾಮನಿರ್ದೇಶಿತರ ಅಧ್ಯಕ್ಷತೆಯಲ್ಲಿರುತ್ತದೆ ಮತ್ತು ಶಾಲಾ ಪ್ರಾಂಶುಪಾಲರನ್ನು ಕಾರ್ಯದರ್ಶಿಯಾಗಿ ಒಳಗೊಂಡಿರುತ್ತದೆ. ಅಲ್ಲದೇ ಈ ಸದಸ್ಯತ್ವವು ಐದು ಪೋಷಕರನ್ನು ಒಳಗೊಂಡಿದೆ. ಅವರನ್ನು ಪಾಲಕ-ಶಿಕ್ಷಕರ ಸಂಘದಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಇವರ ಜೊತೆಗೆ ಶಾಲೆಯ ಮೂವರು ಶಿಕ್ಷಕರು ಮತ್ತು ಸಮಿತಿಗೆ ವೀಕ್ಷಕರಾಗಿ ಕಾರ್ಯನಿರ್ವಹಿಸುವ ಶಿಕ್ಷಣ ನಿರ್ದೇಶಕರಿಂದ ನಾಮನಿರ್ದೇಶಿತರಾದ ಒಬ್ಬರು ಸದಸ್ಯರಾಗಿರಬೇಕು. ಸದಸ್ಯರಲ್ಲಿ, ಒಬ್ಬರು SC/ST ಅಥವಾ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರ ವರ್ಗದಿಂದ ಬಂದವರಾಗಿರಬೇಕು ಮತ್ತು ಕನಿಷ್ಠ ಇಬ್ಬರು ಸದಸ್ಯರು ಮಹಿಳೆಯರಾಗಿರಬೇಕು. ಸಮಿತಿಯು ಆಗಸ್ಟ್ 15ರ ಮೊದಲು ವರ್ಷಕ್ಕೊಮ್ಮೆಯಾದರೂ ಸಭೆ ಸೇರಿ ಮುಂಬರುವ ಶೈಕ್ಷಣಿಕ ವರ್ಷಕ್ಕೆ ಶಾಲೆಯ ಪ್ರಸ್ತಾವಿತ ಶುಲ್ಕವನ್ನು ಸರ್ವಾನುಮತದಿಂದ ಅನುಮೋದಿಸಬೇಕು. ಅನುಮೋದನೆ ಪಡೆದ ನಂತರ, ಶುಲ್ಕವನ್ನು ಮೂರು ವರ್ಷಗಳ ನಂತರ ಪರಿಷ್ಕರಿಸಬಹುದು.

ದಂಡ ಎಷ್ಟು?
ಮಸೂದೆಯ ಪ್ರಕಾರ, ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡಿದರೆ ಒಂದು ಲಕ್ಷದಿಂದ ಐದು ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಪುನರಾವರ್ತನೆಯಾದರೆ, ದಂಡವು ದ್ವಿಗುಣಗೊಳ್ಳುತ್ತದೆ. ಅಂದರೆ ಎರಡು ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ದಂಡ ಬೀಳುತ್ತದೆ. ನಿರಂತರವಾಗಿ ನಿಯಮ ಪಾಲಿಸದಿದ್ದರೆ ಶಾಲೆಯ ಮಾನ್ಯತೆಯನ್ನು ಅಮಾನತುಗೊಳಿಸಲು ಅಥವಾ ಹಿಂಪಡೆಯಲು, ಶುಲ್ಕವನ್ನು ಪರಿಷ್ಕರಿಸುವ ಹಕ್ಕನ್ನು ನಿರ್ಬಂಧಿಸಲು ಅಥವಾ ಅದರ ನಿರ್ವಹಣೆಯನ್ನು ವಹಿಸಿಕೊಳ್ಳಲು DoEಗೆ ಅಧಿಕಾರವಿದೆ.

ಪರೀಕ್ಷಾ ಫಲಿತಾಂಶಗಳನ್ನು ತಡೆಹಿಡಿಯುವುದು, ವಿದ್ಯಾರ್ಥಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು ತರಗತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರಾಕರಿಸಿದರೆ ಪ್ರತಿ ವಿದ್ಯಾರ್ಥಿಗೆ 50,000 ರೂ.ನಂತೆ ಶಾಲೆಗೆ ದಂಡ ವಿಧಿಸಲಾಗುತ್ತದೆ.

ಈ ಮಸೂದೆಯಿಂದ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಬೀಳಲಿದೆ. ಇದು ಪೋಷಕರಿಗೆ ಹೊರೆಯನ್ನು ಕಡಿಮೆ ಮಾಡಲಿದೆ. ಇನ್ನುಮುಂದೆ ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಶಾಲೆ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಆಶಿಶ್ ಸೂದ್ ಹೇಳಿದ್ದಾರೆ. ದೆಹಲಿ ಸರ್ಕಾರದ ಈ ಕ್ರಮ ದೇಶದ ಉಳಿದ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಿದೆ.

Share This Article