ಕರ್ನಾಟಕದಲ್ಲಿ 39,577 ಕೋಟಿ ಜಿಎಸ್‌ಟಿ ವಂಚನೆ, ವರ್ತಕರಿಗೆ ನಾವು ನೋಟಿಸ್‌ ನೀಡಿಲ್ಲ: ಸೀತಾರಾಮನ್‌

Public TV
2 Min Read

ನವದೆಹಲಿ: ಕರ್ನಾಟಕದಲ್ಲಿ (Karnataka) 2024-25ನೇ ಆರ್ಥಿಕ ವರ್ಷದಲ್ಲಿ 1,254 ಪ್ರಕರಣಗಳಲ್ಲಿ 39,577 ಕೋಟಿ ರೂ. ಮೊತ್ತದ ಜಿಎಸ್‌ಟಿ ವಂಚನೆ (GST Fraud) ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದರು.

ಬಿಜೆಪಿ ಸಂಸದರಾದ ಡಾ.ಕೆ. ಸುಧಾಕರ್‌ ಹಾಗೂ ತೇಜಸ್ವಿ ಸೂರ್ಯ ಪ್ರಶ್ನೆಗೆ ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು, ಈ ಪ್ರಕರಣಗಳಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿದ ಬಳಿಕ 1,623 ಕೋಟಿ ರೂ. ಮೊತ್ತ ಸ್ವಯಂಪ್ರೇರಿತವಾಗಿ ಪಾವತಿ ಆಗಿದೆ. ಎಂದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ವಂಚನೆ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ ಎಂದರು. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ

ಸಣ್ಣ ವರ್ತಕರಿಗಿಲ್ಲ ನೋಟಿಸ್‌: ಯುಪಿಐ (UPI) ವಹಿವಾಟುಗಳ ಆಧಾರದಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಣ್ಣ ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಯಾವುದೇ ನೋಟಿಸ್‌ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಯುಪಿಐ ಮೂಲಕ ವಾರ್ಷಿಕ 40 ಲಕ್ಷ ರೂ. ಹೆಚ್ಚಿನ ವಹಿವಾಟು ನಡೆಸಿದ್ದ ಬೇಕರಿ, ಹೋಟೆಲ್, ಬೀಡಾ ಅಂಗಡಿ ಮತ್ತು ಟೀ ಅಂಗಡಿ ಮಾಲೀಕರಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ನೋಂದಣಿ ಮಾಡಿಸಿ ಮತ್ತು ಜಿಎಸ್‌ಟಿ ಪಾವತಿಸಿ ಎಂದು ಸೂಚಿಸಿದ್ದರು. ಈ ಕ್ರಮಕ್ಕೆ ಆಕ್ಷೇಪ ಎದುರಾಗಿತ್ತು. ನೋಟಿಸ್‌ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ವರ್ತಕರು ಪ್ರತಿಭಟನೆ ನಡೆಸಿದ್ದರು. ಜಿಎಸ್‌ಟಿ ಕೇಂದ್ರದ್ದು ಎಂದು ಕಾಂಗ್ರೆಸ್‌ ದೂರಿದ್ದರೆ, ಕರ್ನಾಟಕದಲ್ಲಿ ಮಾತ್ರ ಈ ರೀತಿ ವಸೂಲು ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದರು. ಇದು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿತ್ತು.

ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿದ್ದ 9,000 ಸಣ್ಣ ವರ್ತಕರು ಇಲ್ಲಿಯವರೆಗೂ ಪಾವತಿಸಬೇಕಿದ್ದ ಜಿಎಸ್‌ಟಿ ಮನ್ನಾ ಮಾಡಲು ಸಮ್ಮತಿಸಿದ್ದರು.

ಸರಕುಗಳ ವಾರ್ಷಿಕ ವಹಿವಾಟು ಮಿತಿಯನ್ನು 40 ಲಕ್ಷ ರೂ. ಹಾಗೂ ಸೇವಾ ವಹಿವಾಟು ಮಿತಿಯನ್ನು 20 ಲಕ್ಷ ರೂ.ಗೆ ಸರ್ಕಾರ ನಿಗದಿಪಡಿಸಿದೆ. ಈ ಮಿತಿ ದಾಟಿದವರು ಜಿಎಸ್‌ಟಿ ನೋಂದಣಿ ಮಾಡಿಸುವುದು ಹಾಗೂ ನಿಯಮದಂತೆ ತೆರಿಗೆ ಪಾವತಿಸುವುದು ಕಡ್ಡಾಯ.

Share This Article