ನವದೆಹಲಿ: ದೆಹಲಿಯಲ್ಲಿ (Delhi) ಬೀದಿ ನಾಯಿಗಳ (Stray Dogs) ಹಾವಳಿ ನಿಯಂತ್ರಿಸಲು 2 ತಿಂಗಳೊಳಗೆ ಆಶ್ರಯತಾಣಗಳಿಗೆ ಅವುಗಳನ್ನು ಸೇರಿಸುವಂತೆ ಸುಪ್ರೀಂ ಕೋರ್ಟ್ (Supreme Court) ನೀಡಿದ್ದ ಆದೇಶಕ್ಕೆ ʻಪೆಟಾʼ (PETA) ಸಂಸ್ಥೆ ಪ್ರತಿಕ್ರಿಯಿಸಿದೆ. ಬೀದಿನಾಯಿಗಳನ್ನು ಆಶ್ರಯ ತಾಣಗಳಿಗೆ ಸೇರಿಸೋ ಕ್ರಮ ಅವೈಜ್ಞಾನಿಕವಾಗಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಗಾಜಿಯಾಬಾದ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ, ಬೀದಿ ನಾಯಿಗಳನ್ನು 2 ತಿಂಗಳೊಳಗೆ ಆಶ್ರಯ ತಾಣಗಳಿಗೆ ಸಾಗಿಸಲು ಆದೇಶಿಸಿತ್ತು. ಅಲ್ಲದೇ ಅವುಗಳು ಮತ್ತೆ ರಸ್ತೆಗೆ ಬರದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ಕ್ರಮಕ್ಕೆ ಯಾರಾದರೂ ಅಡ್ಡ ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು. ಈ ತೀರ್ಪಿನ ಬೆನ್ನಲ್ಲೇ ಪೆಟಾ ಇಂಡಿಯಾದ ಪಶುವೈದ್ಯಕೀಯ ವ್ಯವಹಾರಗಳ ಹಿರಿಯ ನಿರ್ದೇಶಕಿ ಡಾ. ಮಿನಿ ಅರವಿಂದನ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ
ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಅವುಗಳನ್ನು ಬಂಧನದಲ್ಲಿಡುವುದು ವೈಜ್ಞಾನಿಕವಲ್ಲ. 2022-23 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೆಹಲಿಯಲ್ಲಿ ಸುಮಾರು 10 ಲಕ್ಷ ನಾಯಿಗಳಿವೆ. ಅವುಗಳಲ್ಲಿ ಅರ್ಧ ಭಾಗಕ್ಕಿಂತಲೂ ಕಡಿಮೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ. ನಾಯಿಗಳನ್ನು ಆಶ್ರಯ ತಾಣಗಳಲ್ಲಿಡುವ ಕ್ರಮ, ಅಂತಿಮವಾಗಿ ನಾಯಿಗಳ ಸಂಖ್ಯೆ ಕಡಿಮೆ ಆಗುವಂತೆ ಮಾಡುತ್ತದೆಯೇ ಹೊರತು, ರೇಬೀಸ್ ಅಥವಾ ನಾಯಿ ಕಡಿತದ ಘಟನೆಗಳನ್ನು ತಡೆಯಲು ಏನನ್ನೂ ಮಾಡುವುದಿಲ್ಲ. 2001ರಲ್ಲಿ ನಾಯಿಗಳಿಗೆ ಸಂತಾನಹರಣ ಮತ್ತು ಲಸಿಕೆ ಹಾಕುವ ಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆ ಸರಿಯಾಗಿ ಜಾರಿಗೆ ತಂದಿದ್ದರೆ, ಇಂದು ರಸ್ತೆಯಲ್ಲಿ ಯಾವುದೇ ನಾಯಿಗಳು ಇರುತ್ತಿರಲಿಲ್ಲ ಎಂದಿದ್ದಾರೆ.
ಕೆಲವರು ನೆರೆಹೊರೆಯ ನಾಯಿಗಳನ್ನು ಕುಟುಂಬದ ಭಾಗದಂತೆ ಭಾವಿಸುತ್ತಾರೆ. ಈ ರೀತಿ ಲಕ್ಷಾಂತರ ನಾಯಿಗಳನ್ನು ಬಲವಂತವಾಗಿ ಬಂಧನದಲ್ಲಿಡುವುದು ಶ್ವಾನಪ್ರಿಯರಲ್ಲಿ ಬೇಸರ ಉಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಣಾಮಕಾರಿಯಲ್ಲದ ಮತ್ತು ಅಮಾನವೀಯ ಸ್ಥಳಾಂತರದಿಂದ ಸಮಯ, ಶ್ರಮ ಮತ್ತು ಸಾರ್ವಜನಿಕರ ಹಣ ವ್ಯರ್ಥ ಮಾಡುವ ಬದಲು, ಪರಿಣಾಮಕಾರಿ ಸಂತಾನಹರಣದಂತಹ ತುರ್ತು ಕ್ರಮಗಳು ಅಗತ್ಯವಾಗಿದೆ. ಅಲ್ಲದೇ ಪ್ರಾಣಿಗಳನ್ನು ತ್ಯಜಿಸಲು ಕಾರಣವಾಗುವ ಅಕ್ರಮ ಸಾಕುಪ್ರಾಣಿ ಅಂಗಡಿಗಳು ಮತ್ತು ತಳಿಗಾರರ ವಿರುದ್ಧ ಕ್ರಮಕೈಗೊಳ್ಳಬೇಕು. ಪ್ರಾಣಿಗಳ ಆಶ್ರಯ ಅಥವಾ ಬೀದಿಯಿಂದ ಅಗತ್ಯವಿರುವ ನಾಯಿಯನ್ನು ಸಾಕಲು ಸಾರ್ವಜನಿಕರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ | ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು: ಸುಪ್ರೀಂ ಕೋರ್ಟ್