ದೆಹಲಿ | ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು: ಸುಪ್ರೀಂ ಕೋರ್ಟ್‌

Public TV
2 Min Read

ನವದೆಹಲಿ: ದೆಹಲಿಯಲ್ಲಿ (Delhi) ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ (Stray Dogs) ಬಗ್ಗೆ ಸುಪ್ರೀಂ ಕೋರ್ಟ್‌ (Supreme Court) ಕಳವಳ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳನ್ನು 2 ತಿಂಗಳಲ್ಲಿ ಆಶ್ರಯತಾಣಗಳಿಗೆ ಸೇರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು ಎಂದು ಕೋರ್ಟ್‌ ಖಡಕ್‌ ಎಚ್ಚರಿಕೆ ನೀಡಿದೆ.

ಬೀದಿ ನಾಯಿಗಳ ದಾಳಿಯ ಬಳಿಕ ಹೆಚ್ಚುತ್ತಿರುವ ರೇಬೀಸ್ (Rabies) ಹಾಗೂ ಸಾವಿನ ಕುರಿತಾದ ವರದಿಯನ್ನು ಗಮನಿಸಿದ ನಂತರ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ನಗರದಲ್ಲಿ ನಡೆಯುತ್ತಿರುವ ಬೀದಿ ನಾಯಿಗಳ ದಾಳಿಯನ್ನು ʻಅತ್ಯಂತ ಭೀಕರʼ ಎಂದು ಪೀಠ ಹೇಳಿದೆ. ಅಲ್ಲದೇ ನಾಯಿಗಳನ್ನು ಆಶ್ರಯ ತಾಣಗಳಿಗೆ ಸೇರಿಸುವಾಗ ಸಂಬಂಧಪಟ್ಟ ಸಿಬ್ಬಂದಿಯನ್ನು ತಡೆಯಲು ಯತ್ನಿಸಿದರೆ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಕೋರ್ಟ್‌ ನೀಡಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

ತೀರ್ಪಿನ ವೇಳೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮಕ್ಕಳು ಮತ್ತು ವೃದ್ಧರ ಸುರಕ್ಷತೆಗಾಗಿ ಬೀದಿ ನಾಯಿ ಮುಕ್ತ ಪ್ರದೇಶ ಮಾಡಲು ಕ್ರಮಕೈಗೊಳ್ಳಬೇಕು. ಈ ವಿಚಾರವಾಗಿ ಪ್ರಾಣಿ ಪ್ರಿಯರು ಸುಮ್ಮನೇ ಏನೋ ಮಾತಾಡಬಾರು. ಅವರಿಗೆ ಬೀದಿ ನಾಯಿಗಳ ದಾಳಿಯಲ್ಲಿ ಮೃತಪಟ್ಟ ಮಕ್ಕಳನ್ನು ವಾಪಸ್‌ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

ದೆಹಲಿ NCR ಪ್ರದೇಶದ ಅಧಿಕಾರಿಗಳು 2 ತಿಂಗಳಲ್ಲಿ ನಾಯಿಗಳ ಆಶ್ರಯ ನಿರ್ಮಿಸಿ ಮೂಲಸೌಕರ್ಯಗಳ ನಿರ್ಮಿಸಿದ ಬಗ್ಗೆ ವರದಿ ನೀಡಬೇಕು. ಅಲ್ಲಿ ನಾಯಿಗಳಿಗಾಗಿ ಸಾಕಷ್ಟು ಸಿಬ್ಬಂದಿಯನ್ನು ಇರಿಸಬೇಕು. ಅಲ್ಲಿಂದ ಯಾವುದೇ ನಾಯಿಗಳನ್ನು ಹೊರಗೆ ಕರೆದೊಯ್ಯದಂತೆ ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶದ ವೇಳೆ ಕೋರ್ಟ್‌ ಹೇಳಿದೆ.

ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ರೇಬೀಸ್‌ಗೆ ಬಲಿಯಾಗಬಾರದು. ಬೀದಿ ನಾಯಿಗಳಿಂದ ಕಚ್ಚಲ್ಪಡುವ ಭಯವಿಲ್ಲದೆ ಅವರು ಮುಕ್ತವಾಗಿ ಓಡಾಡಬಹುದು ಎಂಬ ವಿಶ್ವಾಸ ಈ ಕ್ರಮದಿಂದ ಬರಬೇಕು. ಇನ್ನೂ, ನಾಯಿ ಕಡಿತ ಮತ್ತು ರೇಬೀಸ್‌ನ ಎಲ್ಲಾ ಪ್ರಕರಣಗಳ ಮಾಹಿತಿ ಪಡೆಯಲು 1 ವಾರದೊಳಗೆ ಸಹಾಯವಾಣಿಯನ್ನು ರಚಿಸಬೇಕು. ಸಹಾಯವಾಣಿಗೆ ಬರುವ ದೂರು ಸ್ವೀಕರಿಸಿದ ನಂತರ ನಾಯಿಯನ್ನು ಹಿಡಿಯಲು 4 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಡ್ಡ ಬರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಆಶ್ರಯ ತಾಣಗಳಲ್ಲಿ ನಾಯಿಗಳಿಗೆ ಸಂತನೋತ್ಪತಿ ತಡೆಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಅವುಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಆದೇಶದ ವೇಳೆ ಕೋರ್ಟ್‌ ಹೇಳಿದೆ. ಇದನ್ನೂ ಓದಿ: ಈ ವರ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆ ಇಲ್ಲ: ಹೈಕೋರ್ಟ್‌ಗೆ ಎಜಿ ಶಶಿಕಿರಣ್‌ ಶೆಟ್ಟಿ ಸ್ಪಷ್ಟನೆ

Share This Article