ಸಚಿವ ಸ್ಥಾನಕ್ಕೆ ಕೆಎನ್‌ ರಾಜಣ್ಣ ರಾಜೀನಾಮೆ

Public TV
0 Min Read

ಬೆಂಗಳೂರು: ಸಚಿವ ಸ್ಥಾನಕ್ಕೆ ಸಹಕಾರಿ ಸಚಿವ ರಾಜಣ್ಣ (KN Rajanna) ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್‌ (High Command) ಸೂಚನೆಯ ಬೆನ್ನಲ್ಲೇ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕೆಎನ್‌ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದ್ದರು. ಹೀಗಾಗಿ ಸಿಎಂ ರಾಜೀನಾಮೆ ಅಂಗೀಕರಿಸುತ್ತಾರಾ ಇಲ್ವೋ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಅಂತಿಮವಾಗಿ ಆಪ್ತ ರಾಜಣ್ಣ ಅವರ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ.

ಆರಂಭದಲ್ಲಿ ಸೆಪ್ಟೆಂಬರ್‌ ಕ್ರಾಂತಿಯ ಹೇಳಿಕೆ ನೀಡಿ ರಾಜಣ್ಣ ಸಂಚಲನ ಮೂಡಿಸಿದ್ದರು. ರಾಹುಲ್‌ ಗಾಂಧಿ (Rahul Gandhi) ಮತಗಳ್ಳತನ ಆರೋಪ ಮಾಡಿದ ನಂತರ ರಾಜಣ್ಣ ನಮ್ಮ ಅವಧಿಯಲ್ಲಿ ಮತಪಟ್ಟಿ ಸಿದ್ಧವಾಗಿತ್ತು ಎಂದು ಹೇಳಿದ್ದರು.

 

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರು ಕಣ್ಣುಮುಚ್ಚಿ ಕುಳಿತಿದ್ದರೇ ಎಂದು ರಾಜಣ್ಣ ಪ್ರಶ್ನಿಸಿದ್ದರು. ರಾಜಣ್ಣ ಅವರ ಈ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಈ ಹೇಳಿಕೆಯ ನಂತರ  ಹೈಕಮಾಂಡ್‌ ರಾಜಣ್ಣಗೆ ರಾಜೀನಾಮೆ ಸಲ್ಲಿಸಲು ಸೂಚನೆ ನೀಡಿತ್ತು.  ಕರ್ನಾಟಕ ಕಾಂಗ್ರೆಸ್‌  ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಸಿಎಂಗೆ ಕರೆ ಮಾಡಿ ರಾಜೀನಾಮೆ ಪಡೆಯುವಂತೆ  ಸೂಚನೆ ನೀಡಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ರಾಜೀನಾಮೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ರಾಜಣ್ಣ, ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅಲ್ಲಿಯವರೆಗೂ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ರಾಜಣ್ಣ ಹೇಳಿದ್ದೇನು?

ಮತಗಳ್ಳತನ (Vote Theft) ಎಂದು ನಾವು ಹೇಳುತಿದ್ದೇವೆ. ಇದು ನಡೆದಿರೋದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೆ ಈಗ ಹೇಳುತ್ತಿರುವುದು ನಮಗೆ ನಾಚಿಕೆ ಆಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ಪ್ರಶ್ನಿಸುವ ಮೂಲಕ  ರಾಜಣ್ಣ  ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದರು.  ಅಲ್ಲದೇ ಈ ಅಕ್ರಮಗಳು ನಡೆದಿರೋ ಸತ್ಯ. ಇದರಲ್ಲಿ ಯಾವುದೇ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Share This Article