ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಉಸಿರು ಬಿಟ್ಟ ಸಿದ್ದಾಪುರದ ಆಟೋ ಚಾಲಕ

Public TV
1 Min Read

ಕಾರವಾರ: ತನ್ನ ಸಾವಿನಲ್ಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ‌ ಆಟೋ ಚಾಲಕ ಸಾರ್ಥಕತೆ ಮೆರೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿ ಮೂಲದ ವಿನಾಯಕ ವೆಂಕಟೇಶ ನಾಯ್ಕ ಅವರು ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ ಚಲಾಯಿಸುತ್ತಿದ್ದಾಗ ಬೆಂಗಳೂರಿನ ಸೀತಾ ಸರ್ಕಲ್ ಬಳಿ ಬಿಎಂಟಿಸಿ ಬಸ್ ಹಿಂಭಾಗದಿಂದ ರಿಕ್ಷಕ್ಕೆ ಗುದ್ದಿತ್ತು‌. ಆಟೋದಲ್ಲಿ ಇದ್ದ ಪ್ರಯಾಣಿಕರು ಸಾವು ಕಂಡಿದ್ದರೆ, ವಿನಾಯಕ್ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.

ಅಪಘಾತದಿಂದ ವಿನಾಯಕ ವೆಂಕಟೇಶ್ ನಾಯ್ಕ ಕೋಮಾಕ್ಕೆ ಜಾರಿದ್ದರು. ಆದರೆ, ಬದುಕಿಗಾಗಿ 13 ದಿನಗಳ ಹೋರಾಟ ನಡೆಸಿದರೂ ಮಿದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ, ಅವರ ಆಸೆಯಂತೆ ಅಂಗಾಂಗವನ್ನು ದಾನ ಮಾಡಲಾಗಿದ್ದು, ಎಂಟು ಜನರಿಗೆ ಅವರ ಅಂಗಗಳನ್ನು ನೀಡಲಾಗಿದೆ.

ಈ ಮೂಲಕ ತನ್ನ ಸಾವಿನಲ್ಲೂ ಇನ್ನೊಬ್ಬರ ಜೀವನಕ್ಕೆ ಬೆಳಕಾಗಿದ್ದು, ಸಾರ್ಥಕತೆ ಮೆರೆದಿದ್ದಾರೆ. ಭಾನುವಾರ ಅವರ ಮೃತದೇಹವನ್ನು ಸಿದ್ದಾಪುರದ ಶಿರಳಿಗೆ ತರಲಾಗಿದ್ದು, ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

Share This Article