150 ಕಿಮೀ ಸ್ಪೀಡಲ್ಲಿ ಕಾರು ಚಾಲನೆ – ASI ಪುತ್ರನ ರೇಸ್‌ ಚಟಕ್ಕೆ ಇಬ್ಬರು ಪಾದಚಾರಿಗಳು ಬಲಿ

By
2 Min Read

ನವದೆಹಲಿ: ಗುಜರಾತ್‌ನ (Gujarat) ಭಾವನಗರದಲ್ಲಿ ಪೊಲೀಸ್‌ ಅಧಿಕಾರಿಯ ಮಗ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಹರ್ಷರಾಜ್ ಸಿಂಗ್ ಗೋಹಿಲ್ (20) ಸಂಜೆ 4 ಗಂಟೆ ಸುಮಾರಿಗೆ ಕಲಿಯಬೀದ್ ಪ್ರದೇಶದ ಸಾಕಷ್ಟು ಜನದಟ್ಟಣೆಯ ಬೀದಿಯಲ್ಲಿ ತನ್ನ ಸ್ನೇಹಿತನೊಂದಿಗೆ ರೇಸಿಂಗ್ ಮಾಡುತ್ತಿದ್ದ. ಕ್ರೆಟಾ ಚಾಲನೆ ಮಾಡುತ್ತಿದ್ದಾಗ, ಅವನ ಸ್ನೇಹಿತ ಕೆಂಪು ಬ್ರೆಝಾ ಕಾರನ್ನು ಚಲಾಯಿಸುತ್ತಿದ್ದ. ಇದನ್ನೂ ಓದಿ: ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೇಗವಾಗಿ ಬಂದ ಬಿಳಿ ಬಣ್ಣದ ಕ್ರೆಟಾ ಕಾರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಂತರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ.

ಸ್ಥಳೀಯ ಅಪರಾಧ ವಿಭಾಗದ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಅನಿರುದ್ಧ ಸಿಂಗ್ ವಜುಭಾ ಗೋಹಿಲ್ ಅವರ ಪುತ್ರ ಹರ್ಷರಾಜ್ ಗಂಟೆಗೆ 120 ರಿಂದ 150 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ, ಕಾರು ನಿಯಂತ್ರಣ ಕಳೆದುಕೊಂಡು, ಇಬ್ಬರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆಯಲ್ಲಿ ಸ್ಕಿಡ್ ಆಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಸ್ಕೂಟರ್‌ನ ಟೈರ್‌ಗಳು ಕೂಡ ಸಿಡಿದಿವೆ. ಸ್ಕೂಟರ್‌ನಲ್ಲಿ ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಭಾರತೀಯ ವಿಮಾನಗಳಿಗೆ ವಾಯು ಮಾರ್ಗ ಬಂದ್ – ಆ.24ರವರೆಗೆ ವಿಸ್ತರಿಸಿದ ಪಾಕ್

ಘಟನೆಯಲ್ಲಿ ಇತರ ಹಲವು ವಾಹನಗಳು ಕೂಡ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾದಚಾರಿಗಳಾದ ಭಾರ್ಗವ್ ಭಟ್ (30) ಮತ್ತು ಚಂಪಾಬೆನ್ ವಚಾನಿ (65) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ ಸರ್ ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಭಾರ್ಗವ್ ಭಟ್ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತಕ್ಕೆ ಬಲಿಯಾಗಿದ್ದಾರೆ.

ಹರ್ಷರಾಜ್‌ಗೆ ರೇಸ್‌ ಮೇಲೆ ಕ್ರೇಜ್‌ ಹೆಚ್ಚು. ಸ್ನೇಹಿತನ ಜೊತೆ ಸೇರಿಕೊಂಡು ಕಾರು ರೇಸ್‌ ಮಾಡಿದ್ದ. ಅಪಘಾತದ ಬಳಿಕ ಆರೋಪಿ ಹರ್ಷರಾಜ್‌ನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಅಧಿಕಾರಿಯಾಗಿದ್ದ ಆತನ ತಂದೆ ತಕ್ಷಣ ಸ್ಥಳಕ್ಕೆ ಧಾವಿಸಿ, ಮಗನನ್ನು ಥಳಿಸಿ ನೀಲಂಬಾಗ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

Share This Article