ಜಾರ್ಖಂಡ್ | ಚಂಡೀಲ್‌ನಲ್ಲಿ ಹಳಿ ತಪ್ಪಿದ 2 ಗೂಡ್ಸ್ ರೈಲಿನ 20 ಬೋಗಿಗಳು – ಸಂಚಾರದಲ್ಲಿ ವ್ಯತ್ಯಯ

Public TV
1 Min Read

ರಾಂಚಿ: ಜಾರ್ಖಂಡ್‌ನ (Jharkhand) ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯ ಚಂಡೀಲ್ ನಿಲ್ದಾಣದ ಬಳಿ ಶನಿವಾರ ಮುಂಜಾನೆ ಎರಡು ಗೂಡ್ಸ್ ರೈಲುಗಳ (Goods Train) 20 ಬೋಗಿಗಳು (ವ್ಯಾಗನ್) ಹಳಿತಪ್ಪಿದ ಪರಿಣಾಮ ಆಗ್ನೇಯ ರೈಲ್ವೆಯ ಚಾಂಡಿಲ್-ಟಾಟಾನಗರ ವಿಭಾಗದ ನಡುವಿನ ರೈಲು ಸೇವೆಗಳಲ್ಲಿ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣದಿಂದ 200 ಮೀ ದೂರದಲ್ಲಿ ಗೂಡ್ಸ್ ರೈಲುಗಳ ಹಳಿ ತಪ್ಪಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಂಡೀಲ್ (Chandil) ರೈಲ್ವೆ ನಿಲ್ದಾಣಕ್ಕೆ ಬರುವ ಹಾಗೂ ನಿರ್ಗಮಿಸುವ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

ಅಲ್ಪಾವಧಿಗೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ಚಾಂಡಿಲ್-ಟಾಟಾನಗರ, ಚಾಂಡಿಲ್-ಮುರಿ ಮತ್ತು ಚಾಂಡಿಲ್-ಪುರುಲಿಯಾ-ಬೊಕಾರೊ ಮಾರ್ಗಗಳ ರೈಲು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ವ್ಯಾಗನ್‌ಗಳ ತೆರವು ಕಾರ್ಯ ಹಾಗೂ ಹಳಿಗಳ ದುರಸ್ಥಿ ಮಾಡಲಾಗುತ್ತಿದ್ದು, ಆದಷ್ಟು ಬೇಗ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ.

ಟಾಟಾನಗರ ರೈಲು ನಿಲ್ದಾಣದಿಂದ ಹೊರಡುವ ಅನೇಕ ರೈಲುಗಳನ್ನು ರದ್ದಾಗಿದ್ದು, ಇವುಗಳಲ್ಲಿ ಟಾಟಾ-ಪಾಟ್ನಾ ವಂದೇ ಭಾರತ್ ಎಕ್ಸ್ಪ್ರೆಸ್, ಟಾಟಾ-ಬಕ್ಸಾರ್ ಸೂಪರ್‌ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಟಾಟಾ-ಧನ್‌ಬಾದ್ ಸ್ವರ್ಣರೇಖಾ ಎಕ್ಸ್ಪ್ರೆಸ್ ರೈಲು ಸಂಚಾರ ಸ್ಥಗಿತಗೊಂಡಿದೆ.

Share This Article