ಬೆಂಗಳೂರು: ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲು ಸರ್ಕಾರ ಪೊಲೀಸರನ್ನು ಬಳಸುತ್ತಿದೆ. ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ, ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಪಾತ್ರ ಇಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಾ.ಕೆ.ಸುಧಾಕರ್ (K Sudhakar) ವಿರುದ್ಧ ಎಫ್‌ಐಆರ್ ಮಾಡಿ ಎ1 ಆರೋಪಿ ಮಾಡಿದ್ದಾರೆ. ಆತ್ಮಹತ್ಯೆಗೆ ಅವರೇ ಸಂಪೂರ್ಣ ಒತ್ತಡ ಹೇರಿದರೆ ಮಾತ್ರ ಈ ರೀತಿ ಎಫ್‌ಐಆರ್ ಮಾಡಬೇಕಾಗುತ್ತದೆ. ಆದರೆ ಸುಧಾಕರ್ ಚಾಲಕ ಬಾಬು ಅವರ ಜೊತೆ ಆಪ್ತ ಸಂಬಂಧವೇನೂ ಇಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಜಾತಿ ನಿಂದನೆಯ ಆರೋಪ ಬರುವುದೇ ಇಲ್ಲ. ಸುಧಾಕರ್ ಆ ವ್ಯಕ್ತಿಯನ್ನು ಎದುರಿಗೆ ನಿಲ್ಲಿಸಿಕೊಂಡು ನಿಂದಿಸಿಲ್ಲ, ಅಥವಾ ಸಂದೇಶ ಕಳುಹಿಸಿಲ್ಲ. ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ನಾಯಕರನ್ನು ಗುರಿಯಾಗಿಸುವುದು ಸ್ಪಷ್ಟವಾಗಿದೆ ಎಂದರು. ಇದನ್ನೂ ಓದಿ: ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಭೈರೇಗೌಡ ನೇಮಕ
ಈ ಹಿಂದೆ ಶಾಸಕ ಬೈರತಿ ಬಸವರಾಜ್ ಅವರ ಮೇಲೂ ಇದೇ ರೀತಿ ಕ್ರಮ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಡೆತ್‌ನೋಟ್ ಬರೆದಿಟ್ಟು ಸತ್ತಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಲೇ ಇಲ್ಲ. ಪೊಲೀಸರು ಎಲ್ಲರಿಗೂ ಸಮಾನವಾಗಿ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ʻಕುಣಿಯಲು ಬಾರದೇ ನೆಲ ಡೊಂಕುʼ ರಾಹುಲ್ ಗಾಂಧಿ ಮತಗಳ್ಳತನ ಆರೋಪಕ್ಕೆ ಪ್ರಹ್ಲಾದ್ ಜೋಶಿ ವ್ಯಂಗ್ಯ
ಚಾಲಕ ಬಾಬು ಬೇರೆ ಬೇರೆ ಕಾರಣಗಳಿಂದ ಸಾಲ ಮಾಡಿದ್ದರು. ಅವರಿಗೆ ಕೆಲವರು ವಂಚನೆ ಮಾಡಿದ್ದರು. ಆದರೆ ಇದರಲ್ಲಿ ಡಾ.ಕೆ.ಸುಧಾಕರ್ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ. ವಿರೋಧ ಪಕ್ಷದವರಿಗೆ ಕಿರುಕುಳ ಕೊಡಲು ಸರ್ಕಾರ ಹೀಗೆ ಮಾಡುತ್ತಿದೆ. ಈ ಪ್ರಕರಣದಲ್ಲಿ ಡೆತ್‌ನೋಟ್ ಮುಂಚಿತವಾಗಿಯೇ ಸಿಕ್ಕರೂ ಅದನ್ನು ಪೊಲೀಸರಿಗೆ ತಿಳಿಸಿಲ್ಲ. ಚಾಲಕ ಬಾಬು ಅವರ ಕುಟುಂಬದವರು ಡಾ.ಕೆ.ಸುಧಾಕರ್ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದರೂ, ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಸಪ್ತರಾತ್ರೋತ್ಸವಕ್ಕೆ ಚಾಲನೆ