ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಭೈರೇಗೌಡ ನೇಮಕ

Public TV
1 Min Read

ಹಾಸನ: ಇಲ್ಲಿನ (Hassan) ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರವಾಗಿ ಕಳೆದ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಹಾಸನ ಜಿಲ್ಲಾ ನೂತನ ಉಸ್ತುವಾರಿ ಸಚಿವರನ್ನಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು (Krishna Byre Gowda) ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಉಸ್ತುವಾರಿ ಹೊಣೆಗಾರಿಕೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೊತ್ತಿದ್ದರು. ಈಗ ಕೃಷ್ಣಬೈರೇಗೌಡ ಅವರನ್ನು ನೇಮಿಸಿ ಸ್ವತಃ ಸಿಎಂ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಸ್ವತಃ ಕೆ.ಎನ್.ರಾಜಣ್ಣ ಅವರು ನನಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆ ಮಾಡಿ ಎಂದು ಖುದ್ದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಆದರೆ ಕೆ.ಎನ್.ರಾಜಣ್ಣ ಅವರನ್ನು ಬದಲಾವಣೆ ಮಾಡಿರಲಿಲ್ಲ.

ಕೆಲ ದಿನಗಳ ಹಿಂದೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನೇಮಕ ವಿಚಾರದಲ್ಲಿ ನಾನು ಹೇಳಿದವರನ್ನೇ ನೇಮಿಸಬೇಕು. ಅದರಲ್ಲೂ ಹಾಸನ ವಿಧಾನಸಭಾ ಕ್ಷೇತ್ರದ ಮುಖಂಡರಿಗೇ ಜವಾಬ್ದಾರಿ ನೀಡಬೇಕು. ಹೀಗಾದರೆ ಮುಂದಿನ ಚುನಾವಣೆಯಲ್ಲಿ ಅನುಕೂಲ ಆಗಲಿದೆ ಎಂದು ಮುಖ್ಯಮಂತ್ರಿ ಎದುರೇ ಪಟ್ಟು ಹಿಡಿದಿದ್ದರು. ಅದಕ್ಕೆ ಸಿಎಂ ಒಪ್ಪದೇ ಇದ್ದಾಗ, ನೀವು ಯಾರನ್ನಾದರೂ ಮಾಡಿಕೊಳ್ಳಿ, ನಾನು ಧ್ವಜಾರೋಹಣಕ್ಕೂ ಹಾಸನಕ್ಕೆ ಹೋಗುವುದಿಲ್ಲ ಎಂದಿದ್ದರು.

ಕೃಷ್ಣಭೈರೇಗೌಡರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ಜೆಡಿಎಸ್ ಶಾಸಕ ಹೆಚ್.ಪಿ.ಸ್ವರೂಪ್‍ಪ್ರಕಾಶ್ ಸ್ವಾಗತಿಸಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ನಮಗೆ ಸಹಕಾರ ಮಾಡಿದ್ದರು. ಇದೀಗ ಕೃಷ್ಣಭೈರೇಗೌಡರನ್ನು ನೇಮಿಸಲಾಗಿದೆ. ಕೃಷ್ಣಭೈರೇಗೌಡರು ಕಂದಾಯ ಸಚಿವರಾದ ಮೇಲೆ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ತಂದಿದ್ದಾರೆ. ಆದ್ದರಿಂದ ಜಿಲ್ಲೆಯ ಜನತೆ ಹಾಗೂ ನಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿ ಜೊತೆಗೆ ಸಾರ್ವಜನಿಕರಿಗೂ ಉತ್ತಮವಾದ ಕೆಲಸಗಳಾಗುತ್ತವೆ ಎಂಬ ಭರವಸೆ ಮೂಡಿದೆ ಎಂದಿದ್ದಾರೆ.

Share This Article