ವಿಕೆಟ್‌ ಪಡೆಯಲು ಪರದಾಡಿದ ಬೌಲರ್‌ಗಳು – ಭರ್ಜರಿ 186 ರನ್‌ ಮುನ್ನಡೆಯಲ್ಲಿ ಇಂಗ್ಲೆಂಡ್‌

Public TV
2 Min Read

ಮ್ಯಾಚೆಂಸ್ಟರ್‌: ಜೋ ರೂಟ್‌ (Joe Root) ಅವರ ಶತಕ, ಬೆನ್‌ ಸ್ಟೋಕ್ಸ್‌ ಮತ್ತು ಓಲಿ ಪೋಪ್‌ ಅವರ ಅರ್ಧಶತಕದ ನೆರವಿನಿಂದ ಭಾರತದ (India) ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್‌ ಕ್ರಿಕೆಟ್‌ನ ಮೂರನೇ ದಿನ ಇಂಗ್ಲೆಂಡ್‌ (England) 186 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಭಾರತದ 358 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್‌ 135 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 544 ರನ್‌ ಹೊಡೆದಿದೆ. ಎರಡನೇ ದಿನ 2 ವಿಕೆಟ್‌ ನಷ್ಟಕ್ಕೆ 225 ರನ್‌ ಹೊಡೆದಿದ್ದ ಇಂಗ್ಲೆಂಡ್‌ ಇಂದು 5 ವಿಕೆಟ್‌ಗಳ ಸಹಾಯದಿಂದ 319 ರನ್‌ ಹೊಡೆಯಿತು. ಇಂದು 89 ಓವರ್‌ ಎಸೆದ ಭಾರತ ಬೌಲರ್‌ಗಳಿಗೆ ದಕ್ಕಿದ್ದು ಕೇವಲ 5 ವಿಕೆಟ್‌ಗಳು ಮಾತ್ರ.

ಔಟಾಗದೇ ಉಳಿದಿದ್ದ ಜೋ ರೂಟ್‌ 150 ರನ್‌(248 ಎಸೆತ, 14 ಬೌಂಡರಿ ಹೊಡೆದು ಔಟಾದರೆ, ಓಲಿ ಪೋಪ್‌ 71 ರನ್‌(128 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಇವರಿಬ್ಬರು ಮೂರನೇ ವಿಕೆಟಿಗೆ 231 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. ಅಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟಿನಲ್ಲಿ ಎರಡನೇ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಜೋ ರೂಟ್‌ ಪಾತ್ರರಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ

ನಾಯಕ ಬೆನ್‌ ಸ್ಟೋಕ್ಸ್‌ (Ben Stokes) 77 ರನ್‌ (134 ಎಸೆತ, 6 ಬೌಂಡರಿ) ಲಿಯಾಮ್ ಡಾಸನ್ 21 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಶನಿವಾರ ಭಾರತದ ಬೌಲರ್‌ಗಳು ಉತ್ತಮವಾಗಿ ಆಡಿ ಬೇಗನೇ ವಿಕೆಟ್‌ ತೆಗೆದು ನಂತರ ಭಾರತ ಔಟಾಗದೇ ದಿನಪೂರ್ತಿ ಆಡಿದರೆ ಪಂದ್ಯಕ್ಕೆ ರೋಚಕ ತಿರುವು ಸಿಗಬಹುದು. ಹೀಗಾಗಿ 4ನೇ ದಿನದಲ್ಲಿ ಭಾರತದ ಆಟ ಯಾವ ರೀತಿ ಇರಲಿದೆ ಎನ್ನುವುದರ ಪಂದ್ಯ ಡ್ರಾ/ ಜಯದ ಬಗ್ಗೆ ಲೆಕ್ಕಾಚಾರ ಹಾಕಬಹುದು.

ಭಾರತದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಎರಡು ವಿಕೆಟ್‌ ಪಡೆದರೆ ಬುಮ್ರಾ, ಸಿರಾಜ್‌, ಕಾಂಬೋಜ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article