ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

Public TV
2 Min Read

ನವದೆಹಲಿ: ಬಾಹ್ಯಾಕಾಶದಲ್ಲಿ 18 ದಿನ ಕಳೆದು ವಾಪಸ್‌ ಆದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ (Shubhanshu Shukla) ಭೂಮಿಗೆ ಹೊಂದಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

ಕಳೆದ ವಾರ ಯಶಸ್ವಿ ಬಾಹ್ಯಾಕಾಶ ಯಾನದಿಂದ ಹಿಂದಿರುಗಿದ ಭಾರತೀಯ ಗಗನಯಾತ್ರಿ ಶುಕ್ಲಾ, ಭೂಮಿಯ ಮೇಲೆ ನಡೆಯಲು ಕಲಿಯುತ್ತಿದ್ದಾರೆ. ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಜೂನ್ 25 ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದ ನಾಲ್ವರು ಗಗನಯಾತ್ರಿಗಳು ಶುಕ್ಲಾ ಕೂಡ ಒಬ್ಬರು. ಐಎಸ್‌ಎಸ್‌ನಲ್ಲಿ ಸುಮಾರು 18 ದಿನಗಳನ್ನು ಕಳೆದ ನಂತರ ಅವರು ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದರು. ಇದನ್ನೂ ಓದಿ: ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ – ಮಗನನ್ನು ಕಂಡು ಪೋಷಕರು ಭಾವುಕ

ಶುಕ್ಲಾ ಅವರು ಮತ್ತೆ ನಡೆಯಲು ಪ್ರಯತ್ನಿಸುತ್ತಿರುವ ಮತ್ತು ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಮಕ್ಕಳು ಆಗ ತಾನೆ ನಡೆಯುವುದನ್ನು ಕಲಿಯುತ್ತಿರುವಂತೆ ಇರುವ ದೃಶ್ಯ ವೀಡಿಯೋದಲ್ಲಿದೆ. ಶುಕ್ಲಾ ಅವರು ನಡೆಯಲು ಇಬ್ಬರು ಸಹಾಯ ಮಾಡುತ್ತಿದ್ದಾರೆ.

ಬೇಗ ಚೇತರಿಸಿಕೊಳ್ಳಿ ಎಂದು ನನಗೆ ಅನೇಕರು ಸಂದೇಶ ಕಳುಹಿಸುತ್ತಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ನಿಮಗೆಲ್ಲರಿಗೂ ಧನ್ಯವಾದ. ಗುರುತ್ವಾಕರ್ಷಣೆ ಇಲ್ಲದ ವಾತಾವರಣಕ್ಕೆ ನನ್ನ ದೇಹ ಒಗ್ಗಿಕೊಂಡಿತ್ತು. ಈಗ ಗುರುತ್ವಾಕರ್ಷಣೆಗೆ ಮರಳಿದಾಗ, ಇಲ್ಲಿಗೆ ಮತ್ತೆ ಹೊಂದಿಕೊಳ್ಳಬೇಕು. ನನ್ನ ದೇಹ ಬಹುಬೇಗ ಭೂಮಿ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದನ್ನು ಕಂಡು ನನಗೆ ಅಚ್ಚರಿಯಾಯಿತು ಎಂದು ಶುಕ್ಲಾ ತಿಳಿಸಿದ್ದಾರೆ.

ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು ವೈದ್ಯಕೀಯ ಮತ್ತು ಮರು-ಹೊಂದಾಣಿಕೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಜುಲೈ 23 ರವರೆಗೆ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಉಲ್ಲೇಖಿಸಿ ಅಧಿಕೃತ ಹೇಳಿಕೆ ತಿಳಿಸಿದೆ. ಇದನ್ನೂ ಓದಿ: ಭೂಮಿಗೆ ವಾಪಸ್‌ ಆದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿ ಸ್ವಾಗತ

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುಕ್ಲಾ ಅವರ ಮೂರು ವಾರಗಳ ವಾಸ್ತವ್ಯವು ಭಾರತವು ತನ್ನದೇ ಆದ ಗಗನಯಾನ ಯೋಜನೆಗೆ ತಯಾರಿ ನಡೆಸುತ್ತಿರುವಾಗ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಿರ್ವಹಿಸಲು ಕೊಡುಗೆ ನೀಡಿದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Share This Article