ತಿರುವನಂತಪುರಂ: ತನ್ನ ಅಪ್ರಾಪ್ತ ಮಗಳ ಮೇಲೆ 5 ವರ್ಷದವಳಿದ್ದಾಗಿನಿಂದ 8 ವರ್ಷದ ತನಕ ಸತತ ಮೂರು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಕೇರಳದ ಇಡುಕ್ಕಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದೆ. ಅದರ ಜೊತೆ 3 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕರಿಮನೂರ್ ಬಳಿಯ ಬಾಡಿಗೆ ಮನೆಯಲ್ಲಿದ್ದಾಗ ಅಪರಾಧಿ ಈ ಕೃತ್ಯ ಎಸಗಿದ್ದ. 2020 ರಲ್ಲಿ ಈ ಕೃತ್ಯ ಬೆಳಕಿಗೆ ಬಂದಿತ್ತು. ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗೆ ಕರೆತಂದಾಗ, ತಂದೆಯ ಕೃತ್ಯಗಳಿಂದ ನನಗೆ ಈ ಸಮಸ್ಯೆ ಆಗಿದೆಯೇ ಎಂದು ತಾಯಿಯ ಬಳಿ ಪ್ರಶ್ನಿಸಿತ್ತು. ಏನಾಯಿತು ಎಂದು ತಾಯಿ ವಿವರವಾಗಿ ಕೇಳಿದ ನಂತರ ಮತ್ತು ನಂತರದ ಕೌನ್ಸೆಲಿಂಗ್ ಸಮಯದಲ್ಲಿ ಮಗು ತನ್ನ ತಂದೆಯ ಕೃತ್ಯವನ್ನು ಹೇಳಿತ್ತು. ಇದನ್ನೂ ಓದಿ: ಹೆಚ್‍ಡಿಕೆ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆಗೆ ಸುಪ್ರೀಂ ತಡೆ
ಬಳಿಕ ಕರಿಮನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ 3 ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಶಿಜೋಮನ್ ಜೋಸೆಫ್, ಅಪರಾಧಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅಪರಾಧಿಗೆ ವಿಧಿಸಿದ ದಂಡವನ್ನು ದೌರ್ಜನ್ಯಕ್ಕೊಳಗಾದ ಬಾಲಕಿಗೆ ಕೊಡಬೇಕು. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಕ್ಕೆ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಬೇಲ್ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ