ಬೆಂಗಳೂರು: ಶಾಸಕರ ಸರಣಿ ದೂರಿನ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಸುರ್ಜೇವಾಲಾ (Randeep Surjewala) ಇಂದು ಸಚಿವ ಸಂಪುಟ ಸಚಿವರ ಜೊತೆ ಕೊನೇ ದಿನದ ಸಭೆ ನಡೆಸಿದ್ರು. ಇದಾದ ಬಳಿಕ ಸಿಎಂ – ಡಿಸಿಎಂ ಜೊತೆಗೂ ಸಭೆ ನಡೆಸಿ ಹಲವು ಮಾಹಿತಿಗಳನ್ನ ಸುರ್ಜೇವಾಲಾ ಪಡೆದುಕೊಂಡಿದ್ದಾರೆ.
ಸಿಎಂ-ಡಿಸಿಎಂ ಜೊತೆ ಸಭೆ ನಡೆಸಿ ಶಾಸಕರು ಹಾಗೂ ಸಚಿವರ ಸಭೆಯ ಸಂಪೂರ್ಣ ಮಾಹಿತಿ ನೀಡಿದರು. ಜೊತೆಗೆ ಶಾಸಕರ ದೂರಿನ ಲಿಖಿತ ಪ್ರತಿ ಹಾಗೂ ಸಚಿವರ ಸಮರ್ಥನೆಯ ಲಿಖಿತ ಅಂಶಗಳ ದಾಖಲೆ ನೀಡಿದರು. ಸಿಎಂ ಡಿಸಿಎಂ ಇಬ್ಬರಿಗೂ ದಾಖಲೆಗಳನ್ನು ನೀಡಿ ಶಾಸಕರು ಹಾಗೂ ಸಚಿವರ ಸಮಸ್ಯೆ ಏನು..? ಏನು ಮಾಡಬೇಕಿದೆ ಎಂಬ ಚರ್ಚೆ ನಡೆಸಿದರು. ಸಿಎಂ ಡಿಸಿಎಂ ಇಬ್ಬರು ಸಂಪೂರ್ಣವಾಗಿ ದಾಖಲೆಗಳನ್ನು ನೋಡಿದ ನಂತರ ಇನ್ನೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಿದರು.
ಇನ್ನೂ ಸುರ್ಜೇವಾಲಾ ಬುಲಾವ್ ನೀಡಿದ್ದ 23 ಸಚಿವರಲ್ಲಿ ಸಚಿವ ಮಹದೇವಪ್ಪ ಹೊರತುಪಡಿಸಿ ಎಲ್ಲರೂ ಹಾಜರಾಗಿದ್ದಾರೆ. ಇಲಾಖೆಗೆ ಸಂಬಂಧಿತ ವಿಚಾರಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಅಂತ ಸಚಿವರು ಹೇಳಿಕೊಂಡಿದ್ದಾರೆ. ಇತ್ತ, ಸಚಿವ ರಾಜಣ್ಣ, ಸುರ್ಜೇವಾಲ ಹಾಗೂ ಸಿಎಂ ಮಾಹಿತಿ ನೀಡಿ ನಿನ್ನೆ ರಾತ್ರಿ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ.
ಇನ್ನೊಂದೆಡೆ, ರಾಜೇಂದ್ರ ಪುತ್ರ ರಾಜಣ್ಣ, ಅನುದಾನ ಸುರ್ಜೇವಾಲಾ ಕೊಡ್ತಾರಾ? ಸಿಎಂ ಸಿಎಂ, ಡಿಸಿಎಂ ಕೊಡೋದು ಅಂತ ಟಕ್ಕರ್ ಕೊಟ್ಟಿದ್ದಾರೆ. ಇತ್ತ ಕಲಬುರ್ಗಿಯಲ್ಲಿ ಶಾಸಕ ಬಿ.ಆರ್ ಪಾಟೀಲ್ ಸಚಿವ ಜಮೀರ್ ಹೆಸರು ಹೇಳುತ್ತಿದ್ದಂತೆ ಸಿಡಿಮಿಡಿಗೊಂಡಿದ್ದಾರೆ. ಜಮೀರ್ ಯಾವ ದೊಡ್ಡ ಮನುಷ್ಯ ಎಂದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ, ಕುರ್ಚಿ ಕದನದ ಬಗ್ಗೆ ಮತ್ತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಹೈಕಮಾಂಡ್ ಏನೂ ನಿರ್ಧಾರ ಮಾಡುತ್ತೋ ನಾನು ಹಾಗೂ ಡಿಕೆಶಿ ಇಬ್ಬರೂ ಪಾಲಿಸುತ್ತೇವೆ ಎಂದಿದ್ದಾರೆ.
ಇತ್ತ, ಡಿಸಿಎಂ ಡಿಕೆಶಿ ಪರ ಸ್ವಾಮೀಜಿಗಳು ಬ್ಯಾಟಿಂಗ್ ಮುಂದುವರೆಸಿದ್ದಾರೆ. ರಂಭಾಪುರಿ ಶ್ರೀಗಳ ಹೇಳಿಕೆ ಸಮರ್ಥಿಸಿಕೊಂಡ ಶ್ರೀಶೈಲ ಜಗದ್ಗುರುಗಳು, ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಸರ್ಕಾರ ರಚನೆ ವೇಳೆ ಸಿಎಂ ಸ್ಥಾನ ಕುರಿತು ಒಡಂಬಡಿಕೆ ಆಗಿದ್ರೆ ನೆರವೇರಿಸಲಿ ಎಂದಿದ್ದಾರೆ.
4-5 ದಿನಗಳಲ್ಲಿ ನಿಗಮ ಮಂಡಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣ
ನಿಗಮ ಮಂಡಳಿಗೆ 4-5 ದಿನದ ಒಳಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. 600ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರಿಗೆ ನಿಗಮ ಮಂಡಳಿ ನಿರ್ದೆಶಕರಾಗಿ ನೇಮಕಕ್ಕೆ ನಿರ್ಧಾರ ಮಾಡಲಾಗಿದ್ದು, ನೇರವಾಗಿ ಕಾರ್ಯಕರ್ತರಿಗೆ ನೇಮಕಾತಿ ಆದೇಶ ತಲುಪಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. 32 ನಿಗಮಗಳಿಗೆ ಅಧ್ಯಕ್ಷರ ಆಯ್ಕೆಗೆ ಬಹಿತೇಕ ಸಮ್ಮತಿ ಅಂತಿಮ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ಪಡೆದು ನೇಮಕಾತಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.