ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

By
1 Min Read

– ಇಡಿ, ಸಿಬಿಐ ನೀಡಿದ ದೂರಿನ್ವಯ ಅಮೆರಿಕದಲ್ಲಿ ಅರೆಸ್ಟ್

ನವದೆಹಲಿ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ (Neerav Modi) ಸಹೋದರ ನೇಹಲ್ ಮೋದಿಯನ್ನು (Nehal Modi) ಅಮೆರಿಕದಲ್ಲಿ ಬಂಧಿಸಲಾಗಿದೆ. ಸಿಬಿಐ ಮತ್ತು ಇಡಿ ನೀಡಿದ ದೂರಿನ್ವಯ ಬಂಧಿಸಲಾಗಿದೆ.

ನೀರವ್ ಮೋದಿಯ ಸಹೋದರ ನೇಹಲ್ ಮೋದಿಯನ್ನು ಜುಲೈ 4ರಂದು ಅಮೆರಿಕದ (America) ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಾಹಿತಿ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002ರ ಸೆಕ್ಷನ್ 3ರ ಅಡಿಯಲ್ಲಿ ಹಣ ವರ್ಗಾವಣೆ ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 120-ಬಿ ಮತ್ತು 201ರಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಹಕರಿಸಿದ್ದ ಆರೋಪ ಪ್ರಕರಣದಲ್ಲಿ ನೇಹಲ್ ಮೋದಿ ಅವರನ್ನು ಹಸ್ತಾಂತರ ಮಾಡುವಂತೆ ಅಮೆರಿಕದ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿತ್ತು. ಇದನ್ನೂ ಓದಿ: ಬಹುಭಾಷಾ ನಟ ಪ್ರಕಾಶ್ ರಾಜ್ ಗುಜರಾತ್‌ನಲ್ಲೂ ಹೋರಾಟ ಮಾಡಲಿ – ಎಂಬಿಪಿ ತಿರುಗೇಟು

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಯಲ್ಲಿ, ನೇಹಲ್ ಮೋದಿಯು ನೀರವ್ ಮೋದಿಯ ಅಕ್ರಮ ಆದಾಯವನ್ನು ಕಾನೂನುಬದ್ಧಗೊಳಿಸಲು ಕೆಲಸ ಮಾಡುತ್ತಿದ್ದ ಪ್ರಮುಖ ವ್ಯಕ್ತಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್‌ ಆದೇಶ

ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿ ಶೆಲ್ ಕಂಪನಿ ಮತ್ತು ವಿದೇಶಿ ವಹಿವಾಟುಗಳ ಜಾಲದ ಮೂಲಕ ಅಪಾರ ಪ್ರಮಾಣದ ಅಕ್ರಮ ಹಣವನ್ನು ಮರೆಮಾಡಲು ಮತ್ತು ವರ್ಗಾಯಿಸಲು ಸಹಾಯ ಮಾಡಿದ ಆರೋಪ ನೇಹಲ್ ಮೇಲಿದೆ. ಹಸ್ತಾಂತರ ಪ್ರಕ್ರಿಯೆಗಳ ಮುಂದಿನ ವಿಚಾರಣೆಯ ದಿನಾಂಕವನ್ನು ಜುಲೈ 17ಕ್ಕೆ ನಿಗದಿಪಡಿಸಲಾಗಿದೆ. ಈ ಸಂದರ್ಭ ನೇಹಲ್ ಮೋದಿ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Share This Article