ಬೆಂಗಳೂರು/ರಾಮನಗರ: ಕನ್ನಡ ಚಿತ್ರರಂಗದ ಮೇರುನಟಿ, ಅಭಿನಯ ಸರಸ್ವತಿ, ಹಿರಿಯ ನಟಿ ಬಿ. ಸರೋಜಾದೇವಿ (B. Saroja Devi) ಅವರ ಅಂತ್ಯಸಂಸ್ಕಾರ (Cremation) ಇಂದು ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ತಾಯಿಯ ಸಮಾಧಿ ಪಕ್ಕವೇ ನಡೆಯಲಿದೆ.
ಈ ಹಿಂದೆ, ಸರೋಜಾದೇವಿ ಬರೆದ ವ್ಹಿಲ್ ಪ್ರಕಾರ, ಗಂಡ ಹರ್ಷ ಸಮಾಧಿ ಪಕ್ಕವೇ ಕೊಡಿಗೇಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಿತ್ತು. ಆದರೆ ಸರೋಜಾದೇವಿ ತೋಟದ ಪಕ್ಕ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿರುವುದರಿಂದ ಚನ್ನಪಟ್ಟಣದ (Channapatna) ದಶಾವರದ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಸರೋಜಮ್ಮ ದಂತಕಥೆ, ಅವರ ಸ್ಥಾನ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ: ನಟ ವಿಶಾಲ್ ಭಾವುಕ
ಇಂದು ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣದತ್ತ ಸಾಗಿಸಲಾಗುತ್ತದೆ. ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನದ ಬಳಿಕ ಹುಟ್ಟೂರಿಗೆ ತರಲಾಗುತ್ತದೆ. ಇದನ್ನೂ ಓದಿ: 1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್
ಪುತ್ರ ಗೌತಮ್ ಮಾತನಾಡಿ, ಪತಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಆಸೆಯನ್ನು ಅಮ್ಮ ವ್ಯಕ್ತಪಡಿಸಿದ್ದರು. ಆದ್ರೆ ಆ ಜಾಗಈಗ ಲೇಔಟ್, ಅಪಾರ್ಟ್ಮೆಂಟ್ ಆಗಿದೆ. ಹೀಗಾಗಿ ಅಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ. ದಶವಾರ ಅವರು ಹುಟ್ಟಿದ ಜಾಗ. ಅವರ ತಾಯಿಯನ್ನು ಅಲ್ಲೇ ಮಣ್ಣು ಮಾಡಲಾಗಿದೆ. ಹಾಗಾಗಿ ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಮಧ್ಯಾಹ್ನ 1:30ಕ್ಕೆ ಅಂತ್ಯಸಂಸ್ಕಾರ ಕೆಲಸಗಳು ನಡೆಯಲಿವೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ನಿಲ್ಲಿಸಿ ಅಂತಿಮ ದರ್ಶನ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನ ನಡೆಯಲಿದ್ದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.