– ಭಾರತಕ್ಕೆ ʼMeasles-Rubella Championʼ ಪ್ರಶಸ್ತಿ
– ದೇಶದಲ್ಲಿ ಶೂನ್ಯ ಡೋಸ್ ಮಕ್ಕಳ ಅನುಪಾತ ಗಣನೀಯ ಇಳಿಕೆ
– ವಾರ್ಷಿಕ ಸರಾಸರಿ 2.6 ಕೋಟಿ ಶಿಶುಗಳಿಗೆ ಉಚಿತ ಲಸಿಕೆ
ನವದೆಹಲಿ: ಜನರ ಆರೋಗ್ಯ ರಕ್ಷಣೆಯಲ್ಲಿ ಜಾಗತಿಕವಾಗಿ ಒಂದು ಹೆಜ್ಜೆ ಮುಂದಿರುವ ಭಾರತ (India) ತಾಯಿ-ಮಕ್ಕಳ ಆರೋಗ್ಯ ಕಾಪಾಡುವಲ್ಲಿ ವಿಶ್ವಕ್ಕೇ ಮಾದರಿಯಾಗಿದೆ. ಇಂದ್ರಧನಷ್‌ನಂತಹ (Mission Indradhanush) ಅತ್ಯದ್ಭುತ ಕಾರ್ಯ ಯೋಜನೆ ಹಾಕಿಕೊಂಡು ಮಕ್ಕಳಲ್ಲಿ ʼಶೂನ್ಯ ಡೋಸ್ʼ ಪ್ರಮಾಣವನ್ನು ಕೇವಲ ಶೇ.0.06ಕ್ಕೆ ಇಳಿಸುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರವಾಗಿದ್ದರೂ ಜನರ ಆರೋಗ್ಯ (Health) ಸಂರಕ್ಷಣೆಯಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಅದರಲ್ಲೂ ತಾಯಿ-ಮಕ್ಕಳ ಆರೋಗ್ಯ (Health) ಕಾಪಾಡುವಲ್ಲಿ ಒಂದು ಕೈ ಮುಂದೆಯೇ ಇದೆ. ʼಇಂದ್ರಧನುಷ್ʼನಂತಹ ಯೋಜನೆ ಮೂಲಕ ಎಲ್ಲ ಮಕ್ಕಳನ್ನೂ ಲಸಿಕೆ ವ್ಯಾಪ್ತಿಗೆ ಕರೆತರುವಲ್ಲಿ ಯಶ ಕಂಡಿದ್ದು, ವಿಶ್ವಸಂಸ್ಥೆಯೇ ಶ್ಲಾಘಿಸುವ ಮಟ್ಟಿಗೆ ಸಾಧನೆಗೈದಿದೆ.
ಭಾರತದಲ್ಲಿ ಒಂದೂ ಲಸಿಕೆ ಪಡೆಯದೇ ಇದ್ದ ʼಶೂನ್ಯ-ಡೋಸ್ʼ ಮಕ್ಕಳ ಪ್ರಮಾಣ 2023ರಲ್ಲಿ ಶೇ.0.11ರಷ್ಟಿತ್ತು. ಅದನ್ನೀಗ 2024ರ ವೇಳೆಗಾಗಲೇ ಶೇ.0.06ಕ್ಕೆ ಅಂದರೆ ಅರ್ಧದಷ್ಟು ಇಳಿಕೆಗೆ ತಂದಿದೆ. ರಾಷ್ಟ್ರೀಯ ರೋಗನಿರೋಧಕ ಪ್ರಯತ್ನಗಳಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ಹೊಸ ದಾಖಲೆ ನಿರ್ಮಿಸಿದ್ದು, ಮಕ್ಕಳ ರೋಗನಿರೋಧಕ ಶಕ್ತಿಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ʼಇಂದ್ರಧನುಷ್ʼ: ತಾಯಿ-ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ʼಇಂದ್ರಧನುಷ್ʼ ಭಾರತದ ಒಂದು ಅತ್ಯಂತ ಯಶಸ್ವಿ ಕಾರ್ಯ ಯೋಜನೆ. ಮಾತ್ರವಲ್ಲದೆ, ಮಕ್ಕಳಿಗೆ 12ಕ್ಕೂ ಅಧಿಕ ರೋಗಗಳ ವಿರುದ್ಧ ರಕ್ಷಣೆ ನೀಡುವಂಥ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ಸಹ ಆಗಿದೆ.
ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮದಡಿ (UIP) ಪ್ರತಿ ವರ್ಷ ಸುಮಾರು 2.6 ಕೋಟಿ ಶಿಶುಗಳು ಮತ್ತು 2.9 ಕೋಟಿ ಗರ್ಭಿಣಿಯರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಭವಿಷ್ಯದ ಕುಡಿಗಳ ರಕ್ಷಣೆಗಾಗಿ 2013ರಲ್ಲಿ ಇದ್ದದ್ದು 6 ಲಸಿಕೆ ಮಾತ್ರ. 2014ರ ಬಳಿಕ 5 ಹೊಸ ಲಸಿಕೆ ಸಹ ಸೇರಿಸಲಾಗಿದೆ. ಇದರಿಂದಾಗಿ ತಾಯಿ-ಮಕ್ಕಳ ಮರಣ ಪ್ರಮಾಣ ಗಣನೀಯ ಇಳಿಕೆಯಾಗಿದ್ದು, ಭಾರತ ಆರೋಗ್ಯ ಸಮೃದ್ಧಿಯತ್ತ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ
ಮಿಷನ್ ಇಂದ್ರಧನುಷ್ ಕಾರ್ಯಕ್ಷಮತೆ: 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ತಾಯಿ-ಮಕ್ಕಳ ಆರೋಗ್ಯ ಸಂರಕ್ಷಣೆಗೆ ಆದ್ಯತೆ ನೀಡಿದ್ದರ ಫಲವಾಗಿ ʼಮಿಷನ್ ಇಂದ್ರಧನುಷ್ʼ ರೂಪಿತವಾಯಿತು. ಇದರ ಮೂಲಕ ಹಳ್ಳಿ ಹಳ್ಳಿ, ಅರಣ್ಯ ವಾಸಿಗಳು ಹಾಗೂ ವಲಸಿಗರ ಮಕ್ಕಳಿಗೂ ಲಸಿಕೆ ತಲುಪಿಸಲು ವಿಶೇಷ ಯೋಜನೆ ಹಾಕಿಕೊಳ್ಳಲಾಯಿತು. ಪರಿಣಾಮವಾಗಿ ಇಂದು ದೇಶದ 5.46 ಕೋಟಿ ಮಕ್ಕಳಿಗೆ ಮತ್ತು 1.32 ಕೋಟಿ ಗರ್ಭಿಣಿಯರಿಗೆ ಲಸಿಕೆ ನೀಡುವಲ್ಲಿ ಯಶಸ್ಸು ಸಾಧಿಸಿದೆ ಭಾರತ.
ಮರಣ ಪ್ರಮಾಣ ಇಳಿಕೆ: ಇತ್ತೀಚಿನ ಒಂದು ದಶಕದಲ್ಲಿ ಭಾರತದ ಆರೋಗ್ಯ ವಲಯದಲ್ಲಿ ಗಮನಾರ್ಹ ಸುಧಾರಣೆ, ಪ್ರಗತಿ ಕಂಡು ಬಂದಿದೆ. ದೇಶದ ಈ ಸಾಧನೆಯನ್ನು ವಿಶ್ವಸಂಸ್ಥೆ ಅಂತರ-ಏಜೆನ್ಸಿ ಗುಂಪು (UN IGME) 2024ರ ತನ್ನ ವರದಿಯಲ್ಲಿ ಶ್ಲಾಘಿಸಿದ್ದು, ಈ ವರದಿ ಪ್ರಕಾರ 2023ರಲ್ಲಿ ಭಾರತದ ತಾಯಂದಿರ ಮರಣ ಅನುಪಾತ ಪ್ರತಿ 1 ಲಕ್ಷ ಜನನಗಳಿಗೆ 80ಕ್ಕೆ ಇಳಿದಿದೆ.ಇಂದ್ರಧನುಷ್ ಲಸಿಕೆ ಯೋಜನೆ ಸಾಫಲ್ಯತೆಯಿಂದಾಗಿ ಶಿಶು ಮತ್ತು ತಾಯಿ ಮರಣ ಪ್ರಮಾಣದಲ್ಲಿ ಐತಿಹಾಸಿಕ ಇಳಿಕೆ ಕಂಡುಬಂದಿದೆ.1990ರಿಂದ ಶೇ.86ರಷ್ಟು ಕಡಿತವಾಗಿದೆ. ಇದು ಜಾಗತಿಕ ಕುಸಿತವಾದ ಶೇ.48ಕ್ಕಿಂತ ಬಹಳ ಮುಂದಿದೆ. 1990–2023ರ ಅವಧಿಯಲ್ಲಿ 5 ವರ್ಷದೊಳಗಿನ ಮಕ್ಕಳ ಮರಣ ದರದಲ್ಲಿ ಶೇ.78 ಮತ್ತು ನವಜಾತ ಶಿಶುಗಳ ಮರಣ ದರದಲ್ಲಿ ಶೇ.70ರಷ್ಟು ಕುಸಿತವನ್ನು ಸಾಧಿಸಿದೆ. ಜಾಗತಿಕವಾಗಿ ಹೋಲಿಸಿದರೆ ಇದು ಕ್ರಮವಾಗಿ ಶೇ.61 ಮತ್ತು ಶೇ.54ರಷ್ಟು ಇಳಿಕೆಯಲ್ಲಿದೆ.
ಭಾರತದ ಕಾರ್ಯ ಯೋಜನೆ: Neonatal-Tetanus ನಿರ್ಮೂಲನೆ, ಪೋಲಿಯೋ ನಿವಾರಣೆ ಮೊದಲಾದ ಗುರಿಗಳು ಈಗಾಗಲೇ ಸಾಧನೆಯ ಹಾದಿಯಲ್ಲಿದ್ದು, 2025ರಲ್ಲಿ ದಡಾರ ಮತ್ತು ರೂಬೆಲ್ಲಾ ನಿರ್ಮೂಲನ ಅಭಿಯಾನ ಜಾರಿಗೊಳಿಸಿ ನಿರಂತರ ಪ್ರಯತ್ನ ಮಾಡುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 41.29 ಕೋಟಿ ಆರೋಗ್ಯ ಕಾರ್ಡನ್ನು ವಿತರಿಸಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಮತ್ತು ಜನಔಷಧಿ ಕೇಂದ್ರಗಳ ಮೂಲಕ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿಗಳನ್ನು ಸಹ ನೀಡುತ್ತಿದೆ. ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಮೂವರು ಯುವಕರು ಶವವಾಗಿ ಪತ್ತೆ
ಜಾಗತಿಕ ಗೌರವ-ಸಾಧನೆಗಳ ಮಾನ್ಯತೆ: ಭಾರತದ ಈ ಪ್ರಗತಿ ಸದ್ಯ ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದು, 2024ರ ಮಾರ್ಚನಲ್ಲಿ ಭಾರತ ಪ್ರತಿಷ್ಠಿತ ಮೀಸಲ್ಸ್ ಮತ್ತು ರುಬೆಲ್ಲಾ ಚಾಂಪಿಯನ್ ಪ್ರಶಸ್ತಿ, ಗೌರವಕ್ಕೆ ಭಾಜನವಾಗಿದೆ. ಅಲ್ಲದೆ, ಲಸಿಕೆ ನೀಡಿಕೆಯಲ್ಲಿ ಜರ್ಮನಿ ಮತ್ತು ಫಿನ್‌ಲ್ಯಾಂಡ್‌ಗಿಂತ ಭಾರತವೇ ಮುನ್ನಡೆ ಸಾಧಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾದರಿಯಾಗಿದೆ. WHO, UNICEF ಮುಂತಾದ ಸಂಸ್ಥೆಗಳ ಮೆಚ್ಚುಗೆಗೆ ಪಾತ್ರವಾಗುವ ಜತೆಗೆ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಯಲ್ಲಿ ನಿರಂತರ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ.
2014ರಲ್ಲಿ ಇಂದ್ರಧನುಷ್ ಆರಂಭವಾದ ದಿನದಿಂದ ದೇಶದ ಆರೋಗ್ಯ ವಲಯದಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ. 12 ಲಸಿಕೆಗಳು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಮಹತ್ವದ್ದಾಗಿದ್ದು, ಅದರಲ್ಲೂ ಪೋಲಿಯೊ ವೈರಸ್ ಲಸಿಕೆ (ಐಪಿವಿ), ರೋಟವೈರಸ್ ಲಸಿಕೆ, ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಮತ್ತು ದಡಾರ-ರುಬೆಲ್ಲಾ ಲಸಿಕೆಗಳು ಪರಿಣಾಮಕಾರಿ ಆಗಿವೆ.
11 ರಾಜ್ಯಗಳ 143 ಜಿಲ್ಲೆಗಳಲ್ಲಿ ಉದ್ದೇಶಿತ ಶೂನ್ಯ ಡೋಸ್ ಅನುಷ್ಠಾನ ಯೋಜನೆ 2024 ಪ್ರಸ್ತುತ ಮುಂದುವರೆದಿದ್ದು, ನಗರಗಳ ಕೊಳೆಗೇರಿಗಳು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಮೂಲೆ ಮೂಲೆಯನ್ನು ತಲುಪುತ್ತಿದೆ. ಭಾರತ 2014ರಿಂದ ನಿರಂತರ ಪಲ್ಸ್ ಪೋಲಿಯೊ ಅಭಿಯಾನ ಮೂಲಕ ಇಂದು ಪೋಲಿಯೊ ಮುಕ್ತ ಎಂಬ ಹೆಗ್ಗಳಿಕೆಯಲ್ಲಿದೆ.
WHO-UNICEF ರಾಷ್ಟ್ರೀಯ ರೋಗನಿರೋಧಕ ವ್ಯಾಪ್ತಿ (WUENIC) 2023ರ ವರದಿ ದತ್ತಾಂಶದ ಪ್ರಕಾರ ಭಾರತ ಪ್ರತಿಜನಕಗಳಲ್ಲಿ ಜಾಗತಿಕ ಸರಾಸರಿಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ. ದೇಶದ DTP-1 (ಪೆಂಟಾವಲೆಂಟ್-1) ವ್ಯಾಪ್ತಿ ಶೇ.93ರಷ್ಟಿದೆ. ಇದು ನೈಜೀರಿಯಾದ ಶೇ.70ಕ್ಕಿಂತ ಗಮನಾರ್ಹ ಎನ್ನುವಂತೆ ಹೆಚ್ಚಾಗಿದೆ. DTP-1 ಮತ್ತು DTP-3 ನಡುವಿನ ಡ್ರಾಪ್ಔಟ್ ದರವು 2013ರಲ್ಲಿ ಶೇ.7ರಿಂದ 2023ರಲ್ಲಿ ಕೇವಲ ಶೇ.2ಕ್ಕೆ ಇಳಿದಿದ್ದು, ಇದೇ ಅವಧಿಯಲ್ಲಿ ದಡಾರ ಲಸಿಕೆ ವ್ಯಾಪ್ತಿ ಸಹ ಶೇ.93ರಷ್ಟು ಸುಧಾರಿಸಿದೆ.
ಮಕ್ಕಳ ಆರೋಗ್ಯದಲ್ಲಿ ಭಾರತವೇ ಮಾದರಿ: ಭಾರತದ ಲಸಿಕೆ ಕಾರ್ಯಕ್ರಮ ಕೇವಲ ಆರೋಗ್ಯದ ಅಂಕಿ-ಅಂಶವಲ್ಲ; ದೇಶದ ಮಾನವ ಸಂಪತ್ತಿನ ಭದ್ರತೆ ಮತ್ತು ಭವಿಷ್ಯದ ತಳಹದಿಯಾಗಿದೆ. ದೇಶದೊಳಗಿನ ಮತ್ತು ಗಡಿಯಲ್ಲಿನ ಪ್ರತಿ ಮಕ್ಕಳಿಗೂ ಸಮಾನ ಆರೋಗ್ಯ ಹಕ್ಕು ಕಲ್ಪಿಸುತ್ತಿದೆ ಕೇಂದ್ರ ಸರ್ಕಾರ. ಈ ವಿಶಿಷ್ಠ ಕಾರ್ಯಯೋಜನೆ, ಭಾರತವನ್ನು ಇಂದು ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದ ಶ್ರೇಷ್ಠ ನಾಯಕನನ್ನಾಗಿ ರೂಪಿಸುತ್ತಿದೆ.