ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ; 30 ವರ್ಷದ ನಂತರ ಬಂಧನ

By
1 Min Read

ಕಾರವಾರ: ಸರ್ಕಾರಿ ನೌಕರಿ ಕೊಡಿಸುವುದಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಪ್ರಕರಣದಲ್ಲಿ 30 ವರ್ಷದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಸುಪರ್ಧಿಗೆ ವಹಿಸಿದ್ದಾರೆ.

ಬೈಂದೂರಿ ಮೂಲದ ಪ್ರಸ್ತುತ ಬೆಂಗಳೂರಿನ ಬಳೆಪೇಠೆಯಲ್ಲಿ ನೆಲಸಿರುವ ಬಿ.ಕೆ.ರಾಮಚಂದ್ರರಾವ್ ಬಂಧಿತ ಆರೋಪಿಯಾಗಿದ್ದಾನೆ. ಈತನು 1990 ರಲ್ಲಿ ಶಿರಸಿಯಲ್ಲಿ ಬಿಳಿಗಿರಿ ಕೊಪ್ಪ ವೆಂಕಟೇಶ ವೈದ್ಯ ಎಂಬಾತನು ಪದವಿ ಓದುತ್ತಿರುವಾಗ ನೀಲಕಂಠ ಹೆಗಡೆ ಎಂಬವರ ಮೂಲಕ ಪರಿಚಯವಾಗಿತ್ತು. ವೆಂಕಟೇಶ್ ಎಂಬಾತನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ 200 ರೂ. ಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದ.

ಈ ಕುರಿತು ಶಿರಸಿ ಠಾಣೆಯಲ್ಲಿ ವೆಂಕಟೇಶ್ ವೈದ್ಯ ದೂರು ದಾಖಲಿಸಿದ್ದರು‌. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ. ಆದರೇ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಮಾರ್ಗದರ್ಶನ ಮತ್ತು ಪಿಎಸ್ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ಅವರ ತಂಡ 30 ವರ್ಷದ ನಂತರ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಿ ಶಿರಸಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ.

ಅಪರಾಧ ಮಾಡಿದವರು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇಬೇಕು ಎಂಬುದು ಈ ಘಟನೆಯಿಂದ ಸಾಬೀತಾಗಿದ್ದು, ಇದೀಗ ಕಾರವಾರ ಜೈಲಿಗೆ ಅಟ್ಟಲಾಗಿದೆ.

Share This Article