– ಆರ್ಥಿಕ ಸಮಸ್ಯೆಯಿಂದ 18,000 ರೂ. ಶುಲ್ಕ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿನಿ
ಲಕ್ನೋ: ಐಎಎಸ್ ಅಧಿಕಾರಿ (IAS Officer) ಆಗಬೇಕೆಂಬ ಕನಸು ಹೊತ್ತ 7ನೇ ತರಗತಿ ಬಾಲಕಿಯೊಬ್ಬಳು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ ವಿಷಯ ಈಗ ಉತ್ತರ ಪ್ರದೇಶದಲ್ಲಿ (Uttar Pradesh) ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯವನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಪ್ರತಿ ಪಕ್ಷಗಳು ಸಿಎಂ ಯೋಗಿ ಅವರ ಮಾತಿಗೂ ಕಿಮ್ಮತ್ತಿಲ್ಲದಂತಾಯ್ತಾ ಎಂಬ ಪ್ರಶ್ನೆ ಎತ್ತಿವೆ.
ವಿದ್ಯಾರ್ಥಿನಿಯ ಸಮಸ್ಯೆ ಏನು?
ಉತ್ತರ ಪ್ರದೇಶದ 7ನೇ ತರಗತಿ ವಿದ್ಯಾರ್ಥಿನಿ (Student) ಪಂಖುರಿ ತ್ರಿಪಾಠಿ ಅವರ ತಂದೆ ರಾಜೀವ್ ಕುಮಾರ್ ತ್ರಿಪಾಠಿ ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡರು. ಇದರಿಂದ ಅವರು ತಮ್ಮ ಕೆಲಸ ಕಳೆದುಕೊಳ್ಳಬೇಕಾಯ್ತು. ಇದು ಕುಟುಂಬದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿತು. ಕೊನೆಗೆ ಬಾಲಕಿಯ ಶಾಲಾ ಶುಲ್ಕ ಪಾವತಿಸುವುದಕ್ಕೂ ಹಣವಿಲ್ಲದಷ್ಟು ಸಮಸ್ಯೆ ಎದುರಾಯಿತು. ನಂತರ ಬಾಲಕಿಯ ಕುಟುಂಬಸ್ಥರು ಆರ್ಥಿಕ ಸಹಾಯಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರ ಮೊರೆ ಹೋದರು. ಆಗ ಯೋಗಿ ಮಗುವಿನ ಶಿಕ್ಷಣಕ್ಕೆ ಯಾವುದೇ ಅಡೆತಡೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿ ಕಳುಹಿಸಿದ್ದರು. ಆದ್ರೆ ಬಾಲಕಿ ಶಾಲೆಗೆ ಹೋದಾಗ ನಡೆದಿದ್ದೇ ಬೇರೆ. ಶಾಲಾ ಆಡಳಿತ ಮಂಡಳಿ ಆ ವಿದ್ಯಾರ್ಥಿನಿಯ ಶುಲ್ಕವನ್ನ ಯಾವುದೇ ಕಾರಣಕ್ಕೂ ಮನ್ನಾ ಮಾಡೋದಿಲ್ಲ ಎಂದು ನಿರಾಕರಿಸಿತು. ಇದನ್ನೂ ಓದಿ: ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ
ಬಳಿಕ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ರು. ಅಲ್ಲದೇ ಮಗುವಿನ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಬಾಲಕಿ ಕುಟುಂಬ ಮುಖ್ಯಮಂತ್ರಿಗಳು ನಮಗೆ ಸಹಾಯ ಮಾಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದೆ. ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ
ಪ್ರತಿ ತಿಂಗಳು 1,650 ರೂ. ಶುಲ್ಕ ಪಾವತಿ
ಬಾಲಕಿ ಪಂಖುರಿ ತ್ರಿಪಾಠಿ ಗೋರಖ್ಪುರದ ಪಕ್ಕಿಬಾಗ್ನಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಆರ್ಎಸ್ಎಸ್ ಶಿಕ್ಷಣ ವಿಭಾಗ ವಿದ್ಯಾಭಾರತಿ ಫೌಂಡೇಷನ್ ನಡೆಸುತ್ತಿರುವ ಈ ಶಾಲೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 1,650 ರೂ. ಶುಲ್ಕ ವಿಧಿಸುತ್ತದೆ. ಪಂಖುರಿ ಸುಮಾರು 18,000 ರೂ. ಬಾಕಿ ಪಾವತಿಸಬೇಕಾಗಿದೆ. ಆದ್ರೆ ತಂದೆ ಕೆಲಸ ಕಳೆದುಕೊಂಡು ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರಿಂದ ಸಹಾಯಕ್ಕಾಗಿ ಸಿಎಂ ಮೊರೆ ಹೋಗಿದ್ದರು. ಇದನ್ನೂ ಓದಿ: ಕ್ಯಾಬ್ ಚಾಲಕರನ್ನೇ ಟಾರ್ಗೆಟ್ ಮಾಡಿ ಹತ್ಯೆ – 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಹಂತಕ ಅರೆಸ್ಟ್
ನನ್ನಪ್ಪ ಅಲ್ಲೇ ಕುಸಿದುಬಿದ್ದರು; ಬಾಲಕಿ ಕಣ್ಣೀರು
ಘಟನೆ ಕುರಿತು ಮಾತನಾಡಿದ ಬಾಲಕಿ ಪಂಖುರಿ, ನಾನು ಶುಲ್ಕ ವಿನಾಯ್ತಿ ಮಾಡುವಂತೆ ಸಹಾಯ ಕೇಳಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದೆ. ಅವರು ನನೆ ಚಾಕೊಲೇಟ್ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದ್ರೆ ನಾನು ನನ್ನಪ್ಪನೊಂದಿಗೆ ಶಾಲೆಗೆ ಹೋದಾಗ ಅವರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ರು. ಶುಲ್ಕ ಮನ್ನಾ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಿಮ್ಮ ತರನೇ ಉಳಿದವರು ಶುಲ್ಕ ವಿನಾಯ್ತಿ ಕೊಡಿ ಅಂದ್ರೆ ಶಾಲೆ ಹೇಗೆ ನಡೆಸೋದು, ಶಿಕ್ಷಕರಿಗೆ ಹಣ ನೀಡಬೇಕಲ್ಲವಾ? ಅಂತೆಲ್ಲ ರೇಗಿದ್ರು. ಅವರ ಮಾತುಗಳನ್ನ ಕೇಳಿ ನನ್ನಪ್ಪ ಅಲ್ಲೇ ಕುಸಿದುಬಿದ್ದರು. ಯಾರೂ ಕೂಡ ಅವರೊಟ್ಟಿಗೆ ಈ ರೀತಿ ಮಾತನಾಡಿರಲಿಲ್ಲ ಎಂದು ಬಾಲಕಿ ಕಣ್ಣೀರಿಟ್ಟಳು.
ಅಲ್ಲದೇ ನಮಗೆ ಇನ್ನೂ ಮುಖ್ಯಮಂತ್ರಿಗಳ ಮೇಲೆ ನಂಬಿಕೆಯಿದೆ. ಅವರು ನಮಗೆ ಸಹಾಯ ಮಾಡೇ ಮಾಡುತ್ತಾರೆ, ನಾನು ಓದಿ ಐಎಎಸ್ ಅಧಿಕಾರಿ ಆಗೇ ಆಗುತ್ತೇನೆ ಎಂದು ಬಾಲಕಿ ಶಪಥ ಮಾಡಿದ್ದಾಳೆ. ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಫೇಲ್, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್
ಘಟನೆ ಬಳಿಕ ಶಾಲಾ ಆಡಳಿತ ಮಂಡಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಆದ್ರೆ ಈವರೆಗೆ ಶಾಲಾ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.