ಭಾರತದಲ್ಲಿ ಪಾಕ್ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಮತ್ತೆ ನಿಷೇಧ

Public TV
2 Min Read

– ಒಂದು ದಿನದ ತೆರವಿನ ನಂತರ 18,000 ಖಾತೆಗಳು ನಿಷೇಧ

ನವದೆಹಲಿ: ಪಾಕ್ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ (Social Media) ಖಾತೆಗಳ ನಿರ್ಬಂಧಕ್ಕೆ ಒಂದು ದಿನ ತೆರವು ನೀಡಿದ ಬಳಿಕ ಇದೀಗ ಮತ್ತೆ ಭಾರತದಲ್ಲಿ (India) ನಿಷೇಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನ (Pahalgam) ಬೈಸರನ್ ವ್ಯಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಭಯೋತ್ಪಾದಕರ ಗುಂಡಿಗೆ ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ನಡೆಸಿತ್ತು, ಈ ಕಾರ್ಯಾಚರಣೆಯನ್ನು ಖಂಡಿಸಿದ ಕೆಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.ಇದನ್ನೂ ಓದಿ: ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಬುಧವಾರ ಕೆಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು. ಇದರಿಂದಾಗಿ ಸಬಾ ಕಮರ್, ಮಾವ್ರಾ ಹೊಕೇನ್, ಆಹದ್ ರಜಾ ಮಿರ್, ಯುಮ್ನಾ ಝೈದಿ ಮತ್ತು ದಾನಿಶ್ ತೈಮೂರ್, ಜೊತೆಗೆ ಹಮ್ ಟಿವಿ, ಎಆರ್‌ವೈ ಡಿಜಿಟಲ್ ಮತ್ತು ಹರ್ ಪಾಲ್ ಜಿಯೋನಂತಹ ಯೂಟ್ಯೂಬ್ ಚಾನೆಲ್‌ಗಳು ಭಾರತದಲ್ಲಿ ಕಾಣಿಸಲಾರಂಭಿಸಿದ್ದವು. ಇದರಿಂದಾಗಿ ಸರ್ಕಾರ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡಿದೆ ಎಂದು ಊಹಾಪೋಹಕ್ಕೆ ಕಾರಣವಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತೀವ್ರ ವಿರೋಧ ವ್ಯಕ್ತವಾಗಿ, ಜನರು #BanPakContent ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಆಕ್ರೋಶ ಹೊರಹಾಕಿದರು. ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಈ ಕ್ರಮವನ್ನು ಖಂಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಪಾಕಿಸ್ತಾನದ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಶಾಶ್ವತ ಡಿಜಿಟಲ್ ನಿಷೇಧವನ್ನು ಜಾರಿಗೊಳಿಸುವಂತೆ ಒತ್ತಾಯಿಸಿದೆ.

ಇದರ ಬೆನ್ನಲ್ಲೇ ಮತ್ತೆ ಪಾಕ್ ಸೆಲೆಬ್ರಿಟಿ ಖಾತೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಖಾತೆಗಳನ್ನು ಹುಡುಕಿದಾಗ ಈ ಖಾತೆಗಳು ಭಾರತದಲ್ಲಿ ಲಭ್ಯವಾಗಿಲ್ಲ. ಸರ್ಕಾರಿ ಮೂಲಗಳ ಪ್ರಕಾರ, ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಬದಲಿಗೆ ತಾಂತ್ರಿಕ ದೋಷದಿಂದ ಉಂಟಾಗಿತ್ತು ಎಂದು ತಿಳಿಸಿದೆ.

ಈ ನಿಷೇಧ ಮತ್ತೆ ಜಾರಿಯಾಗಿರುವ ಬಗ್ಗೆ ಭಾರತ ಸರ್ಕಾರ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ತುರ್ತು ಆಂತರಿಕ ಪರಿಶೀಲನೆಯ ನಂತರ ಸುಮಾರು 18,000ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮತ್ತೆ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಾಬಾನಗರದ ಬಳಿ ಹೊಸ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನಕ್ಕೆ ಎಂ.ಬಿ ಪಾಟೀಲ್ ಮನವಿ

Share This Article