ಪಂಜಾಬ್‌ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್‌

Public TV
2 Min Read

ಚಂಡೀಗಢ: ಪಂಜಾಬ್‌ನ (Punjab) ಫಟ್ಟು ವಾಲಾ ಗ್ರಾಮದಲ್ಲಿರುವ 2ನೇ ಮಹಾಯುದ್ಧದಲ್ಲಿ (World War II) ಬಳಸಲಾಗಿದ್ದ ವಾಯುನೆಲೆಯನ್ನು (Airstrip )ನಕಲಿ ದಾಖಲೆ ಸೃಷ್ಟಿಸಿ 28 ವರ್ಷಗಳ ಹಿಂದೆಯೇ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು (Woman) ತನ್ನ ಮಗನ ಜೊತೆ ಸೇರಿ ಈ ಕೃತ್ಯ ಎಸಗಿದ್ದು, ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ದುಮಾನಿ ವಾಲಾ ಗ್ರಾಮದ ಉಷಾ ಅನ್ಸಾಲ್ ಮತ್ತು ಆಕೆಯ ಮಗ ನವೀನ್ ಚಂದ್ ಅನ್ಸಾಲ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಈ ಇಬ್ಬರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ,  ವಾಯುನೆಲೆಯ ಜಾಗವನ್ನು ಮಾರಾಟ ಮಾಡಿದ್ದಾರೆ. ಭಾರತ 1962, 1965 ಮತ್ತು 1971ರ ಯುದ್ಧಗಳ ಸಮಯದಲ್ಲಿ ಈ ವಾಯು ನೆಲೆಯನ್ನು ಬಳಸಿತ್ತು. ಈ ಭೂಮಿಯನ್ನು 1997 ರಲ್ಲಿ ಮಾರಾಟ ಮಾಡಲಾಗಿದೆ. ಈ ಜಾಗ ಮಾರಾಟ ಮಾಡಿರುವ ಉಷಾ ಮತ್ತು ಚಂದ್‌ ಅನ್ಸಾಲ್‌ ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ವರ್ಷಗಳ ಹಿಂದೆ ಈ ಸಂಬಂಧ ನಿವೃತ್ತ ಕನುಂಗೋ ನಿಶಾನ್ ಸಿಂಗ್ ದೂರು ದಾಖಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2021 ರಲ್ಲಿ, ಪಂಜಾಬ್‌ನ ಹಲ್ವಾರಾ ವಾಯುಪಡೆ ನಿಲ್ದಾಣದ ಅಧಿಕಾರಿಗಳು ಫಿರೋಜ್‌ಪುರದ ಉಪ ಆಯುಕ್ತರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆಗಲೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಬಳಿಕ ನಿಶಾನ್ ಸಿಂಗ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಕುಲ್‌ಗಢಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಷಾ ಹಾಗೂ ಆಕೆಯ ಮಗ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆ ನಕಲಿ ದಾಖಲೆ ಬಳಸಿ IAF (Indian Air Force) ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ನ್ಯಾಯಾಲಯದ ನಿರ್ದೇಶನದ ನಂತರ, ಉಪ ಆಯುಕ್ತರು 1958-59 ರ ಕಂದಾಯ ದಾಖಲೆಗಳ ಪ್ರಕಾರ ಭೂಮಿ ಇನ್ನೂ IAF ವಶದಲ್ಲಿದೆ ಎಂದು ಮೂರು ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿಶಾನ್‌ ಸಿಂಗ್‌ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article