– ಬೀಳಗಿ ಅಂಬೇಡ್ಕರ್ ಹಾಸ್ಟೆಲಿನಲ್ಲಿ ಅವ್ಯವಸ್ಥೆ
– ವಿದ್ಯಾರ್ಥಿಗಳು ದೂರು ನೀಡಿದ್ರೂ ಕ್ಯಾರೇ ಅನ್ನದ ಸಮಾಜ ಕಲ್ಯಾಣ ಇಲಾಖೆ
ಬಾಗಲಕೋಟೆ: ವಾರ್ಡನ್ ಆದವರು ಹಾಸ್ಟೆಲ್‌ನಲ್ಲಿರಬೇಕು. ವಿದ್ಯಾರ್ಥಿಗಳ ಕಷ್ಟಗಳಿಗೆ ನೆರವಾಗಬೇಕು. ಹಾಸ್ಟೆಲ್‌ನಲ್ಲಿರುವ (Hostel) ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ವೋ ಎಂಬುದನ್ನು ಪರಿಶೀಲಿಸಬೇಕು. ಆದರೆ ಬೀಳಗಿ ತಾಲೂಕಿನ ಕೋಲೂರ ಪುನರ್ ವಸತಿ ಕೇಂದ್ರದ ಬಿ ಆರ್ ಅಂಬೇಡ್ಕರ್ ಹಾಸ್ಟೆಲಿನಲ್ಲಿರುವ (BR Ambedkar Hostel) ವಾರ್ಡನ್ (Warden) ಡ್ಯೂಟಿಗೆ ಚಕ್ಕರ್ ಪಗರ್‌ಗೆ ಹಾಜರ್ ಎನ್ನುವ ಹಾಗೆ ಕೆಲಸ ಮಾಡುತ್ತಿದ್ದಾರೆ.
ವಸತಿ ನಿಲಯದಲ್ಲಿ 6 ರಿಂದ 10ನೇ ತರಗತಿಯ 40ಕ್ಕೆ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಪ್ರತಿ ನಿತ್ಯ ಹಾಸ್ಟೆಲ್ ಬಾರದೇ ವಾರ್ಡನ್ ಮತ್ತು ಮುಖ್ಯ ಅಡುಗೆ ಸಹಾಯಕ ವಾರಕ್ಕೆ ಒಂದು, ಎರಡು ಬಾರಿ ಬಂದು ಸಹಿ ಮಾಡಿ ಹೋಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೋಲೂರ ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಇತರೇ ಪಾಲಕರು ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಆವ್ಯವಸ್ಥೆ ಕಂಡು ಶಾಕ್ ಆಗಿದ್ದಾರೆ. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್
ಹಾಸ್ಟೆಲಿನಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ. ಸ್ನಾನ ಮಾಡುವ ಸ್ನಾನ ಗೃಹ, ಶೌಚಾಲಯಗಳು ಸ್ವಚ್ಛವಿಲ್ಲದೇ ವಾಸನೆ ಹೊಡೆಯುತ್ತಿದೆ. ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಿತರಣೆ ಆಗುತ್ತಿದ್ದು, ಫ್ಯಾನ್‌ಗಳು ಕೆಟ್ಟು ನಿಂತಿವೆ. ವಿದ್ಯುತ್ ಹೋದ ಸಂದರ್ಭದಲ್ಲಿ ಆನ್ ಆಗಬೇಕಾದ ಯುಪಿಎಸ್‌ಸಿ ಹಾಳಾಗಿದೆ. ಹಾಸ್ಟೆಲ್ ಸುತ್ತಮುತ್ತ ಕಸ, ಮುಳ್ಳು ಕೊಂಪೆ ಬೆಳೆದಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಮಕ್ಕಳ ಕಲಿಕೆಗೆ ಯಾವುದೇ ರೀತಿಯಲ್ಲಿ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ವಸತಿ ನಿಲಯಕ್ಕೆ ವಾರ್ಡನ್‌ಗಳನ್ನು ನೇಮಕ ಮಾಡುತ್ತದೆ. ಆದರೆ ಈ ವಾರ್ಡನ್, ಅಡುಗೆ ಸಹಾಯಕರು ತಮಗೆ ತಿಳಿದಾಗ ಬಂದು ಸಹಿ ಮಾಡಿ ಹೋಗುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ಪಾಂಡು ಆರೋಪಿಸಿದ್ದಾರೆ. ಇದನ್ನೂ ಓದಿ: ಪತಿಯಿಂದ ದೂರವಿದ್ದ ತಾಯಿ, ಮಗಳು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು
ವಿದ್ಯಾರ್ಥಿಗಳು ಹಲವು ಬಾರಿ ವಸತಿ ನಿಲಯದ ಸಮಸ್ಯೆಗಳು ಮತ್ತು ಅನಾನುಕೂಲತೆಗಳ ಬಗ್ಗೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗಡ್ಡದೇವರಮಠ ಅವರಿಗೆ ತಿಳಿಸಿದ್ದರೂ ವಾರ್ಡನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನಹರಿಸಿ ವಸತಿ ನಿಲಯ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.