– ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಟಾಬಯಲು
ಬೆಂಗಳೂರು: ಕರ್ನಾಟಕ ಸರ್ಕಾರ (Karnataka Government) ಬಿಬಿಎಂಪಿ ಸಹಯೋಗದೊಂದಿಗೆ, ಬೆಂಗಳೂರು (Bengaluru) ನಗರದಾದ್ಯಂತ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯನ್ನು (SC Survey) ನಡೆಸುತ್ತಿದೆ. ಆದರೆ ನಗರದ ಅನೇಕ ಕಡೆ ಇದು ಕಾಟಚಾರಕ್ಕೆ ಮಾಡುತ್ತಿರುವ ಸಮೀಕ್ಷೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಪಬ್ಲಿಕ್ ಟಿವಿ ಕೂಡ ರಿಯಾಲಿಟಿ ಚೆಕ್ ಮಾಡಿದಾಗ ಸಮೀಕ್ಷೆಯ ಕಳ್ಳಾಟ ಬಯಲಾಗಿದೆ.
ನಗರದ ಹಲವು ಕಡೆ ಸಮೀಕ್ಷೆ ಹೋದವರು, ಮನೆಗಳಿಗೆ ಕೇವಲ ಚೀಟಿ ಅಂಟಿಸಿ ಹೋಗುತ್ತಿದ್ದು, ನಿವಾಸಿಗಳ ಬಳಿ ಯಾವುದೇ ದಾಖಲೆ, ಮಾಹಿತಿ ಕೇಳುತ್ತಿಲ್ಲ. ಇನ್ನು ಕೆಲವು ಕಡೆ ಪೌರ ಕಾರ್ಮಿಕರು ಮನೆಯ ಗೋಡೆಗಳಿಗೆ ಚೀಟಿ ಅಂಟಿಸಿ ಹೋಗುತ್ತಿದ್ದಾರೆ. ಈ ಸಂಬಂಧ ನಗರದ ಹಲವು ಕಡೆ ನಿಮ್ಮ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮೂಲಕ ಸತ್ಯ ಸತ್ಯತೆಯನ್ನ ಹೊರಗೆಳೆದಿದೆ. ಇದನ್ನೂ ಓದಿ: ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿ ವೀಡಿಯೋ ರೆಕಾರ್ಡ್ – ಟೆಕ್ಕಿ ಅರೆಸ್ಟ್
ಸಮೀಕ್ಷೆ ಹೇಗೆ ಮಾಡಬೇಕು?
ಪರಿಶಿಷ್ಟ ಪಂಗಡಗಳಿಗೆ ಒಳ ಮೀಸಲಾತಿ ನೀಡಲು ಕೈಗೊಂಡಿರುವ ಸಮೀಕ್ಷೆಯಲ್ಲಿ 101 ಉಪ ಜಾತಿಗಳ ವರ್ಗೀಕರಣಕ್ಕೆ ದತ್ತಾಂಶ ಸಂಗ್ರಹಣೆಗಾಗಿ ಮನೆ ಮನೆ ಹೋಗಿ ಮಾಹಿತಿ ಸಂಗ್ರಹ ಮಾಡಬೇಕು. ಮನೆಯ ಸದಸ್ಯರನ್ನು ಭೇಟಿ ಮಾಡಿ ದಾಖಲೆ ಪರಿಶೀಲನೆ ಮಾಡಿ ಆ ಬಳಿಕ ಸ್ಟಿಕ್ಕರ್ ಅಂಟಿಸಿ ಯಾವುದಾದರೂ ಗೊಂದಲ ಇದ್ದಲ್ಲಿ ಮಾತ್ರ ಕರೆ ಮಾಡುವಂತೆ ಮಾಹಿತಿ ನೀಡಬೇಕು. ಆದರೆ ನೇರ ಭೇಟಿ, ದಾಖಲೆ ಪರಿಶೀಲನೆಯನ್ನೂ ಮಾಡದೇ ನಗರದ ಬಹುತೇಕ ಕಡೆ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ.
ಕಾಟಚಾರದ ಸಮೀಕ್ಷೆ ಹೇಗಿದೆ ಎನ್ನುವುದಕ್ಕೆ ಸಿಸಿಟಿವಿ ಸಾಕ್ಷ್ಯ ಲಭ್ಯವಾಗಿದೆ. ನಗರದ ಹೆಚ್‌ಬಿಆರ್ ಲೇಔಟ್ ನಲ್ಲಿ ಮನೆಯಲ್ಲಿದ್ದ ಯಾರನ್ನೂ ಸಂಪರ್ಕ ಮಾಡದೇ ಮನೆಗೆ ಬಂದವರೇ ಗೋಡೆಗೆ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ. ಬಿಬಿಎಂಪಿ ಅಧಿಕಾರಿ ಸಿಬ್ಬಂದಿಗಳ ಕಳ್ಳಾಟದ ವಿಡಿಯೋವನ್ನು ಕೂಡ ಬೆಂಗಳೂರಿಗರು ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಕೊಟ್ಟ ಪ್ರೀತಿಸಿದ ಹುಡುಗಿ – ಮನನೊಂದು ಯುವಕ ನೇಣಿಗೆ ಶರಣು
ಈ ರೀತಿ ಸಮೀಕ್ಷೆ ಬಗ್ಗೆ ಸಾರ್ವಜನಿಕರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಮನೆಗೆ ಅಂಟಿಸಿದ್ದ ಸ್ಟಿಕ್ಕರ್‌ಗಳಲಿದ್ದ ಸಂಖ್ಯೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಕೇಳದೆ ಹೇಗೆ ಸಮೀಕ್ಷೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಎಚ್ಚರಿಕೆಗೆ ಕಂಗಾಲಾದ ಸಹಾಯವಾಣಿ ಸಿಬ್ಬಂದಿ ಕೂಡ ತಮ್ಮಿಂದ ಆಗಿರೋ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಸಮೀಕ್ಷೆ ಹಳ್ಳ ಹಿಡಿಯಲು ಸರ್ಕಾರವೇ ಕಾರಣ. ಸಂಬಳ ಆಗದ ಕಾರಣ ಆಶಾ ಕಾರ್ಯಕರ್ತೆಯರು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ. ಸಂಬಳ ಆಗದೇ ಕಾರಣ ನಾವು ಹೋಗುತ್ತಿಲ್ಲ ಎಂದು ಆಶಾ ಕಾರ್ಯಕರ್ತರು ಕೂಡ ಹಠ ಹಿಡಿದಿದ್ದಾರೆ. ಮೂರ್ನಾಲ್ಕು ತಿಂಗಳಿನಿಂದ ಸಂಬಳ ಆಗದ ಕಾರಣವೇ ಸಮೀಕ್ಷೆ ಹಳ್ಳ ಹಿಡಿಯುತ್ತಿದೆ.