ಶ್ರೀನಗರ: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ (Amarnath Yatra) ಇಂದು ಬಿಗಿಭದ್ರತೆಯೊಂದಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಅವರು ಚಾಲನೆ ನೀಡಿದರು.
ಅಧಿಕೃತವಾಗಿ ನಾಳೆಯಿಂದ ಆರಂಭವಾಗಲಿದ್ದು, ಇಂದು ಜಮ್ಮುವಿನ ಭಗವತಿ ನಗರದಲ್ಲಿ 5,880 ಭಕ್ತರಿದ್ದ ಮೊದಲ ಶಿಬಿರಕ್ಕೆ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಲಾಯಿತು. ಜು.3ರಂದು ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಯಾತ್ರೆ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆ.7ರವರೆಗೆ 38 ದಿನಗಳ ಕಾಲ ಅಮರನಾಥ ಯಾತ್ರೆ ನಡೆಯಲಿದೆ. ಈ ಹಿನ್ನೆಲೆ ಕಥುವಾದ ಲಖನ್‌ಪುರದಿಂದ ಪವಿತ್ರ ಗುಹೆಯವರೆಗೆ ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ಏಷ್ಯಾ ಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್; ಸೆ.7ಕ್ಕೆ ಭಾರತ-ಪಾಕ್ ಮುಖಾಮುಖಿ
ಜಮ್ಮು-ಶ್ರೀನಗರ ಹೆದ್ದಾರಿ ಸಾವಿರಾರು ಯಾತ್ರಿಕರಿಗೆ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಸಿಆರ್‌ಪಿಎಫ್ ಅದರ ಮೇಲೆ ಕಣ್ಗಾವಲು ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ-9 ಶ್ವಾನ ದಳಗಳನ್ನು ಅದರ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ.
ಉಧಮ್‌ಪುರ ವಲಯದಂತಹ ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ ಹೆದ್ದಾರಿ ಗಸ್ತು ತಿರುಗುವಿಕೆಯನ್ನು ನಡೆಸಲಾಗುತ್ತಿದೆ. ಈ ಸಂಬಂಧ ಸಭೆ ನಡೆಸಿ ಪೊಲೀಸರು, ಧಾರ್ಮಿಕ ಸಂಸ್ಥೆಗಳು, ಟ್ಯಾಕ್ಸಿ ಒಕ್ಕೂಟಗಳು, ವ್ಯಾಪಾರಿಗಳು, ಮಾರುಕಟ್ಟೆ ಮತ್ತು ಹೋಟೆಲ್ ಸಂಘದ ಅಧಿಕಾರಿಗಳಿಂದ ಸಲಹೆಗಳನ್ನು ಪಡೆದಿದ್ದಾರೆ. ಅಮರನಾಥ ಯಾತ್ರಿಕರಿಗೆ ವಸತಿ ಮತ್ತು ಆಹಾರದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಸಾಕಷ್ಟು ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ಬೇಸ್ ಕ್ಯಾಂಪ್‌ನಲ್ಲಿ ಯಾತ್ರಿಕರಿಗೆ ಎಸಿ ಹಾಲ್, ಹ್ಯಾಂಗರ್, ಸಮುದಾಯ ಲಂಗಾರ್ ಸೇವೆ, ಸ್ವಚ್ಛ ಮೊಬೈಲ್ ಶೌಚಾಲಯಗಳನ್ನು ಒದಗಿಸಲಾಗಿದೆ. ಇದರೊಂದಿಗೆ, ಕಥುವಾದ ಲಖನ್‌ಪುರದಿಂದ ಲಂಬಾರ್ ಮತ್ತು ರಾಂಬನ್‌ನ ಬನಿಹಾಲ್‌ಗೆ ಯಾತ್ರೆಯ ಮಾರ್ಗದಲ್ಲಿರುವ ಜಿಲ್ಲೆಗಳ ವಸತಿ ಕೇಂದ್ರಗಳಲ್ಲಿ ಯಾತ್ರಿಕರಿಗೆ ಇದೇ ರೀತಿಯ ಸೌಲಭ್ಯಗಳು ಸಿಗುತ್ತವೆ. ಈಗಾಗಲೇ ಜುಲೈ 1ರಿಂದ ಆಫ್‌ಲೈನ್ ನೋಂದಣಿ ಆರಂಭವಾಗಿದೆ.ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಅಸ್ತು – ಮಾರ್ಗಸೂಚಿ ಬಿಡುಗಡೆ